ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDa) ವಿಭಾಗವು 'ರಿಪರ್ಪಸ್ ಯೂಸ್ಡ್ ಕುಕಿಂಗ್ ಆಯಿಲ್' (RUCO) ಯೋಜನೆಯಡಿ 2024ರಿಂದ 2026ರವರೆಗೆ 45.87 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿದೆ. ಈ ಅವಧಿಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು 28.91 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಆರ್‌ಯುಸಿಒ ಯೋಜನೆಯಡಿ ಸಂಗ್ರಹಿಸಲಾದ ಬಳಸಿದ ಅಡುಗೆ ಎಣ್ಣೆಯನ್ನು ಬಯೋಡೀಸೆಲ್ ಹಾಗೂ ಸಾಬೂನು ತಯಾರಿಕೆಗೆ ಮರುಬಳಕೆ ಮಾಡಲಾಗುತ್ತದೆ.
ಅಡುಗೆ ಎಣ್ಣೆಯನ್ನು ಪದೇಪದೇ ಮರುಬಳಕೆ ಮಾಡುವುದರಿಂದ ಅದರಲ್ಲಿ ಟ್ರಾನ್ಸ್ ಫ್ಯಾಟ್ ಪ್ರಮಾಣ ಗಣನೀಯವಾಗಿ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಎಣ್ಣೆಯ ಮರುಬಳಕೆಯನ್ನು ತಡೆಯಲು ಇಲಾಖೆ ವಿಶೇಷ ಒತ್ತು ನೀಡುತ್ತಿದೆ.
ವೆಚ್ಚ ಕಡಿಮೆ ಮಾಡಲು ಅನೇಕ ಹೊಟೇಲ್ ಗಳು ಹಾಗೂ ಕೆಫೆಗಳು ಒಂದೇ ಎಣ್ಣೆಯನ್ನು ಹಲವು ಬಾರಿ ಬಳಸುತ್ತಿದ್ದು, ಇದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಬಳಸಿದಾಗ ಅದರಲ್ಲಿನ ಟ್ರಾನ್ಸ್ ಫ್ಯಾಟ್ ಪ್ರಮಾಣ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಎಂದು ಕರ್ನಾಟಕದ ಕ್ಯಾನ್ಸರ್ ತಡೆ ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.
ಹೊಟೇಲ್ ಮತ್ತು ಬೇಕರಿ ಮಾಲೀಕರು ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡದಂತೆ ಹಾಗೂ ಶೇ.2ಕ್ಕಿಂತ ಕಡಿಮೆ ಟ್ರಾನ್ಸ್ ಫ್ಯಾಟ್ ಹೊಂದಿರುವ ಅಡುಗೆ ಎಣ್ಣೆಯನ್ನಷ್ಟೇ ಬಳಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ರಾಷ್ಟ್ರೀಯ ಮಟ್ಟದಲ್ಲಿ ಶೇ.2ಕ್ಕಿಂತ ಕಡಿಮೆ ಟ್ರಾನ್ಸ್ ಫ್ಯಾಟ್ ಇರುವ ಅಡುಗೆ ಎಣ್ಣೆಯನ್ನು ಮಾತ್ರ ಬಳಸಬೇಕು ಎಂದು ಘೋಷಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಟ್ರಾನ್ಸ್ ಫ್ಯಾಟ್ ಮುಕ್ತ ಎಣ್ಣೆ ಮತ್ತು ಆಹಾರದ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಗಳು
ಈ ಆರೋಗ್ಯಕರ ಪದ್ಧತಿಗಳನ್ನು ಉತ್ತೇಜಿಸುವ ಭಾಗವಾಗಿ, ರಾಜ್ಯದ ಪ್ರಸಿದ್ಧ ಬೇಕರಿಗಳು ಮತ್ತು ಕೆಫೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸೇರಿ 52 ಸಾವಿರಕ್ಕೂ ಹೆಚ್ಚು ಆಹಾರ ಉದ್ಯಮ ವೃತ್ತಿಪರರಿಗೆ ತರಬೇತಿ ನೀಡಲಾಗಿದೆ.
ಟ್ರಾನ್ಸ್ ಫ್ಯಾಟ್ ಸೇವನೆಯಿಂದ ಮೊದಲು ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನಂತರ ಇದು ಅಲ್ಝೈಮರ್ಸ್ ಮುಂತಾದ ನರಕ್ಷಯ (ನ್ಯೂರೋಡಿಜೆನೆರೇಟಿವ್) ಕಾಯಿಲೆಗಳು ಹಾಗೂ ಫ್ಯಾಟಿ ಲಿವರ್ ಸಮಸ್ಯೆಗೂ ಕಾರಣವಾಗಬಹುದು ಎಂದು ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.
ಕೈಗಾರಿಕಾ ಮಟ್ಟದಲ್ಲಿ ಉತ್ಪಾದನೆಯಾಗುವ ಟ್ರಾನ್ಸ್ ಫ್ಯಾಟ್‌ಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ, ಕಟ್ಟುನಿಟ್ಟಿನ ನಿಗಾ, ವೈಜ್ಞಾನಿಕ ನಿಯಂತ್ರಣ, ಸಾಮರ್ಥ್ಯ ವೃದ್ಧಿ ಹಾಗೂ ಕಾನೂನು ಜಾರಿಯನ್ನು ಎಫ್‌ಡಿಎ ಮತ್ತಷ್ಟು ಬಲಪಡಿಸುತ್ತಿದೆ.
ಕೈಗಾರಿಕಾ ಟ್ರಾನ್ಸ್ ಫ್ಯಾಟ್ ಪ್ರಮಾಣವನ್ನು ಶೇ.2ಕ್ಕಿಂತ ಕಡಿಮೆಗೆ ಮಿತಿಗೊಳಿಸುವ ಕಠಿಣ ಮಾನದಂಡಗಳನ್ನು ಭಾರತ ಈಗಾಗಲೇ ಅಳವಡಿಸಿಕೊಂಡಿದೆ. ಕರ್ನಾಟಕದಲ್ಲಿ ಆಹಾರ ಸರಪಳಿಯ ಎಲ್ಲ ಹಂತಗಳಲ್ಲೂ ಸುಧಾರಿತ ಮೇಲ್ವಿಚಾರಣೆ, ಪ್ರಯೋಗಾಲಯ ಪರೀಕ್ಷೆ, ಅಪಾಯ ಆಧಾರಿತ ತಪಾಸಣೆ ಹಾಗೂ ನಿರಂತರ ಜಾರಿ ಕ್ರಮಗಳ ಮೂಲಕ ಈ ನಿಯಮಗಳ ಅನುಸರಣೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಎಫ್‌ಡಿಎ ತಿಳಿಸಿದೆ.
ಕೈಗಾರಿಕಾ ಟ್ರಾನ್ಸ್ ಫ್ಯಾಟ್ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಫ್‌ಡಿಎ ರಾಜ್ಯಮಟ್ಟದ ಸಂವೇದನಾಶೀಲತಾ ಕಾರ್ಯಕ್ರಮವನ್ನು ಆಯೋಜಿಸಿತ್ತು.