ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಎಲೆಕ್ಟ್ರಿಕ್ ಬಸ್ ಮೇಲೆ ಹಾಕಲಾಗಿದ್ದ "ಕನ್ನಡಿಗ" ಸ್ಟಿಕ್ಕರ್ ಅನ್ನು ತೆಗೆದು ಹಾಕಲಾಗಿದ್ದು, ಇದಕ್ಕೆ ಪ್ರತಿಪಕ್ಷ ಜೆಡಿಎಸ್ ತೀವ್ರ ಆಕ್ರೇಶ ವ್ಯಕ್ತಪಡಿಸಿದೆ.
ಬಿಎಂಟಿಸಿ ಬಸ್ ಚಾಲಕನಿಗೆ "ಕನ್ನಡಿಗ" ಸ್ಟಿಕ್ಕರ್ ಅನ್ನು ತೆಗೆದು ಹಾಕುವಂತೆ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ ಎಂಬ ಆರೋಪದ ನಂತರ ವಿವಾದ ಭುಗಿಲೆದ್ದಿದೆ.
ಕರ್ನಾಟಕದಲ್ಲೇ "ಕನ್ನಡಿಗ" ಅನ್ನೋ ಪದಕ್ಕೆ ಜಾಗವಿಲ್ಲವೇ ?
BMTC ಬಸ್ಸಿನ ಮೇಲೆ ಅಂಟಿಸಿದ್ದ 'ಕನ್ನಡಿಗ' ಸ್ಟಿಕರ್ ತೆರವುಗೊಳಿಸಲು ಪಟ್ಟು ಹಿಡಿದ ಅಧಿಕಾರಿಯ ಈ ಕನ್ನಡ ವಿರೋಧಿ ಧೋರಣೆಯನ್ನು ಜೆಡಿಎಸ್ ಪಕ್ಷವು ಉಗ್ರವಾಗಿ ಖಂಡಿಸುತ್ತದೆ ಎಂದು ಜೆಡಿಎಸ್ ಎಕ್ಸ್ ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದೆ.
ಖಾಸಗಿ ಸಂಸ್ಥೆಗಳ ಜಾಹೀರಾತುಗಳಿಗೆ ಜಾಗ ಕೊಡುವ ಸರ್ಕಾರಕ್ಕೆ, 'ಕನ್ನಡಿಗ' ಎನ್ನುವ ಹೆಮ್ಮೆಯ ಸಾಲು ನಿಷೇಧವೇ ?
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕನ್ನಡಿಗರ ಸರ್ಕಾರವೋ ಅಥವಾ ಕನ್ನಡ ವಿರೋಧಿ ಸರ್ಕಾರವೋ?
ರಾಜ್ಯ ಸರ್ಕಾರ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.