ಬಳ್ಳಾರಿ: ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡದಿದ್ದರೆ ಆಗಸ್ಟ್ 3 ರಿಂದ ʼಚಲೋ ಹೊಲ ಗದ್ದೆʼ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಸಿದರು. ಕರೆಕಲ್ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲಾ ಜಿಲ್ಲೆಗಳಲ್ಲಿ ಬರ ಇದ್ದರೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿಲ್ಲ. ಕೂಡಲೇ ಬರ ಘೋಷಿಸದಿದ್ದರೆ ನಾವೆಲ್ಲರೂ ರೈತರ ಹೊಲದಲ್ಲಿ ಕುಳಿತು ಧರಣಿ ಮಾಡುತ್ತೇವೆ. ರೈತರು ಕಂಗಾಲಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಎಲ್ಲೂ ಸಣ್ಣ ಮೊಳಕೆ ಕೂಡ ಬಂದಿಲ್ಲ ಎಂದರು.
ಬಳ್ಳಾರಿಯ ಕಾಂಗ್ರೆಸ್ ಶಾಸಕರು ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿರುವಾಗ ಇಡೀ ಜಿಲ್ಲೆಯಲ್ಲಿ ರೈತರು ಬಿತ್ತನೆ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಶೇ.18 ರಷ್ಟು ಬಿತ್ತನೆ ನಡೆದು 50 ದಿನಗಳು ಕಳೆದಿವೆ. ಮೆಕ್ಕೆಜೋಳ, ಹತ್ತಿ ಮೊದಲಾದ ಬೆಳೆಗಳ ಬಿತ್ತನೆ ನಡೆದಿದ್ದರೂ ಸಸಿಗಳು ನೆಲದಿಂದ ಮೇಲಕ್ಕೂ ಬಂದಿಲ್ಲ. ಇನ್ನು ಮಳೆ ಬಂದರೂ ಪ್ರಯೋಜನವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಣೆ ಮಾಡದೆ ತಡ ಮಾಡುತ್ತಿದೆ. ಆದಾಯ ಕಡಿಮೆ ಇರುವುದರಿಂದ ಬರ ಘೋಷಣೆ ಮಾಡಿದರೆ ಕೂಡಲೇ ಪರಿಹಾರ ನೀಡಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ. ಬಳ್ಳಾರಿ ತಾಲೂಕಿನಲ್ಲಿ 14.56%, ಕುರುಗೋಡುವಿನಲ್ಲಿ 5.32%, ಸಿರಗುಪ್ಪದಲ್ಲಿ 52.79%, ಸಂಡೂರಿನಲ್ಲಿ 67.33%, ಕಂಪ್ಲಿಯಲ್ಲಿ 34.91% ರಷ್ಟು ಬಿತ್ತನೆಯಾಗಿದೆ. ಒಟ್ಟಾಗಿ ಬಳ್ಳಾರಿಯಲ್ಲಿ 38% ಬಿತ್ತನೆ ನಡೆದಿದೆ ಎಂದು ಹೇಳಿದರು.
ನಾನು ಇಲ್ಲಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಬಂದಿದ್ದಾರೆ ಎಂದು ರೈತರು ದೂರಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ ಈಗ 36 ಟಿಎಂಸಿ ನೀರಿದ್ದರೂ ಅದನ್ನು ಹರಿಸಿಲ್ಲ. ಬಿಜೆಪಿ ಅವಧಿಯಲ್ಲಿ 26 ಟಿಎಂಸಿ ನೀರಿದ್ದಾಗಲೇ ಬೆಳೆಗಾಗಿ ನೀರು ಹರಿಸಲಾಗಿತ್ತು. ಆದ್ದರಿಂದ ಬಿಜೆಪಿಯ ಎಲ್ಲ ಮುಖಂಡರು ಆಂಜನೇಯ ದೇವಾಲಯದಿಂದ ಜಲಾಶಯಕ್ಕೆ ಪಾದಯಾತ್ರೆ ಹೋಗಲಿದ್ದೇವೆ ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆದ ಬಳಿಕ ಹೊಲಗಳು, ಖಜಾನೆ ಹಾಗೂ ಜಲಾಶಯಗಳು ಖಾಲಿಖಾಲಿಯಾಗಿವೆ. ಆದರೆ ಇವರು ಮಾತ್ರ ದೆಹಲಿಯಲ್ಲಿ ಜಾಲಿ ಜಾಲಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ನಂತರ ಅವರು ಬಂದಾಗ ಹೊಸ ಸುಧಾರಣೆಯಾಗಲಿದೆ ಎಂದುಕೊಂಡಿದ್ದೆವು. ಆದರೆ ಇನ್ನೂ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಯಾವುದಕ್ಕೂ ಸಚಿವರು ಬಂದಿಲ್ಲ. ಬರ ಘೋಷಣೆ ಮಾಡದೆ ಕೇಂದ್ರ ಸರ್ಕಾರಕ್ಕೆ 10,000 ಕೋಟಿ ರೂ. ಗೆ ಬೇಡಿಕೆ ಇಡಲಾಗಿದೆ. ಮೊದಲು ಬರ ಅಧ್ಯಯನ ಮಾಡಿ ವರದಿ ರೂಪಿಸಿ, ಕೇಂದ್ರಕ್ಕೆ ಕಳುಹಿಸಬೇಕು. ನಂತರ ಅಧಿಕಾರಿಗಳನ್ನು ಕಳುಹಿಸಿ ಅಧ್ಯಯನ ಮಾಡಿ ಎಲ್ಲ ರಾಜ್ಯಗಳಿಗೆ ಒಟ್ಟಾಗಿ ಪರಿಹಾರ ನೀಡಲಾಗುತ್ತದೆ. ಈ ಪ್ರಕ್ರಿಯೆಯ ಬಗ್ಗೆ ಅರಿವಿದ್ದರೂ ಕಾಂಗ್ರೆಸ್ ಸರ್ಕಾರ ಕ್ರಮ ವಹಿಸಿಲ್ಲ. ಬರ ಘೋಷಣೆ ಮಾಡಿದರೆ ಮಾತ್ರ ವಿಮೆ ಕಂಪನಿಗಳು ಮುಂದೆ ಬರುತ್ತವೆ ಎಂದರು.
ವಿಬಿ ಜಿ ರಾಮ್ ಜೀ ಯೋಜನೆಯಡಿ ರೈತರಿಗೆ ಉದ್ಯೋಗ ಕೊಡಬಹುದು. ಅದನ್ನು ಮಾಡದೇ ಇರುವುದರಿಂದ ಅನೇಕರು ಗೊಳೆ ಹೋಗುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಗೇಟ್ ಹಾಳಾದಾಗ ಮೂರು ಬಾರಿ ಬಂದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಸಿದ್ದೆ. ಬೇರೆ ರಾಜ್ಯಕ್ಕೆ ನೀರು ಹರಿಸುವುದರ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.
ಯಾವುದೇ ಕ್ರಮ ವಹಿಸದ ಸಿಎಂ ಡಿ.ಕೆ.ಶಿವಕುಮಾರ್ ಬೆಳೆ ಬೆಳೆಯಬೇಡಿ ಕರೆ ನೀಡಿದ್ದರು. ಇದಕ್ಕೆ ಪರ್ಯಾಯವಾದ ಕ್ರಮವನ್ನೂ ಸೂಚಿಸಿಲ್ಲ. ವಲಸೆ ಹೋಗುವವರನ್ನು ತಡೆದು ಅವರಿಗೆ ಪರಿಹಾರ ನೀಡುವ ಕೆಲಸ ಮಾಡಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು. ಪ್ರತಿ ತಾಲೂಕಿಗೆ 50 ಕೋಟಿ ರೂ. ನೀಡಿ, ಕುಡಿಯುವ ನೀರು ಹಾಗೂ ಮೇವಿಗೆ ವ್ಯವಸ್ಥೆ ಮಾಡಬೇಕು. ರೈತರು ಎಕರೆಗೆ 30-40 ಸಾವಿರ ರೂ. ಖರ್ಚು ಮಾಡಿದ್ದಾರೆ. ಒಂದು ಕೆಜಿ ಬಿತ್ತನೆ ಬೀಜಕ್ಕೆ 3,000 ರೂ. ಖರ್ಚು ಮಾಡಿದ್ದಾರೆ. ಆದ್ದರಿಂದ ಪ್ರತಿ ಎಕರೆಗೆ 50,000 ರೂ. ನೀಡಬೇಕು. ನಾನು ಕಂದಾಯ ಸಚಿವನಾಗಿದ್ದಾಗ ದುಪ್ಪಟ್ಟು ಪರಿಹಾರ ನೀಡಿದಂತೆಯೇ, ಈಗಲೂ ಸರ್ಕಾರ ದುಪ್ಪಟ್ಟು ಪರಿಹಾರ ನೀಡಬೇಕು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್‌ನಡಿ ಎಷ್ಟು ಹಣ ನೀಡಲಾಗಿದೆ ಎಂದು ಕಾಂಗ್ರೆಸ್ ತಿಳಿಸಲಿ. ಹಿಂದಿನ ಯುಪಿಎ ಸರ್ಕಾರಕ್ಕಿಂತಲೂ ಅಧಿಕ ಪರಿಹಾರವನ್ನು ಎನ್‌ಡಿಎ ನೀಡಿದೆ. ನಾನು ಸಚಿವನಾಗಿದ್ದಾಗ ಒಂದು ಎರಡು ತಿಂಗಳಲ್ಲಿ ಪರಿಹಾರ ಕೊಡಿಸಿದ್ದೆ. ಆದರೆ ಕಾಂಗ್ರೆಸ್ ಇನ್ನೂ ಪರಿಹಾರ ಕೊಟ್ಟಿಲ್ಲ. ರೈತರ ಸಾಲಮನ್ನಾ ಬಗ್ಗೆ ಗಮನಹರಿಸುತ್ತೇನೆಂದು ಸಿಎಂ ಹೇಳಿರುವುದರಿಂದ ಕೂಡಲೇ ಸಾಲಮನ್ನಾ ಮಾಡಿದರೆ ಅನುಕೂಲವಾಗುತ್ತದೆ. ಒಬ್ಬ ರೈತರಿಗೆ 1 ಲಕ್ಷ ರೂ. ವರೆಗೆ ಸಾಲಮನ್ನಾ ಮಾಡಬಹುದು ಎಂದರು.
ಸಿಎಂ ವಿಜಯ್ ಬರುವುದರಿಂದ 10-15 ಕೋಟಿ ರೂ. ಖರ್ಚಾಗಲಿದೆ. ಅವರು ಇಲ್ಲಿಗೆ ಬಂದು ಮೇಕೆದಾಟು ಯೋಜನೆಗೆ ಹಾಗೂ ಕಾವೇರಿ ನೀರು ಹರಿಸದೇ ಇರುವುದಕ್ಕೆ ವಿರೋಧ ಸೂಚಿಸುತ್ತಾರೆ. ಅವರು ಒಂದು ಹನಿ ನೀರು ಕೂಡ ಬಿಟ್ಟುಕೊಡುವುದಿಲ್ಲ. ಹಿಂದೆ ಜಯಲಲಿತಾ ಜೊತೆ ಸಭೆ ನಡೆದಾಗ ಪ್ರಧಾನಮಂತ್ರಿ ಕೂಡ ಇದ್ದರು. ಆ ರೀತಿ ಇಲ್ಲಿ ಯಾರ ಮಧ್ಯಸ್ಥಿಕೆಯೂ ಇಲ್ಲ. ಕೇವಲ ಪತ್ರಿಕೆಯಲ್ಲಿ ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎಂದರು.
ಗಣಿಗಾರಿಕೆಯಿಂದ ಧೂಳು: ರೈತರ ಹೊಲದಲ್ಲಿ ಗಿಡಗಳ ಎಲೆಗಳ ಮೇಲೆ ಧೂಳು ಕೂರುತ್ತಿದೆ. ವೀರಾಪುರ ಕೆರೆಯ ನೀರು ಕಲುಷಿತವಾಗಿದೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆಂದು ಭರವಸೆ ಕೊಟ್ಟಿದ್ದೇನೆ ಎಂದರು.