ತುಮಕೂರು: ಶಟರ್ ಒಡೆದಿಲ್ಲ, ಬಾಗಿಲು ಮುರಿದಿಲ್ಲ. ಆದರೂ ತುಮಕೂರಿನ ಪ್ರಸಿದ್ಧ ಜ್ಯುವೆಲರಿ ಶೋರೂಂ ಒಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಾಲೀಕನಿಗೆ ದೊಡ್ಡ ಶಾಕ್ ಕಾದಿತ್ತು.
ಚಿನ್ನದಂಗಡಿಯಲ್ಲಿ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿಯ ಕಾವಲಿತ್ತು. ಆದರೂ ದಿಢೀರನೆ ಒಂದೊಂದೇ ಚಿನ್ನದ ಉಂಗುರ, ಸರಗಳು ನಾಪತ್ತೆಯಾಗಲು ಶುರುವಾಗಿದ್ದವು. ಕಳ್ಳರ ಕೈಚಳಕವೆಂದು ಭಾವಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಅಂಗಡಿ ಮಾಲೀಕರಿಗೆ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಶಾಕ್ ಆಗಿದೆ.
ಕಳ್ಳತನ ಮಾಡಿದ್ದು ಯಾವುದೇ ಖತರ್ನಾಕ್ ಲೂಟಿಕೋರರಲ್ಲ, ಬದಲಿಗೆ ಅಂಗಡಿಯಲ್ಲೇ ಹರಿದಾಡುತ್ತಿದ್ದ ಪುಟ್ಟ 'ಇಲಿ' ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ತುಮಕೂರಿನ ಬಿ.ಎಚ್. ರಸ್ತೆಯಲ್ಲಿರುವ ‘ವಿಶ್ವಾಸ್ ಜ್ಯುವೆಲರಿ ಶಾಪ್’ನಲ್ಲಿ ಈ ಅಪರೂಪದಲ್ಲೇ ಅಪರೂಪದ ಘಟನೆ ವರದಿಯಾಗಿದೆ.
10 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ
ಅಂಗಡಿಯ ಪ್ರದರ್ಶನ ಮಳಿಗೆ ಹಾಗೂ ಕೌಂಟರ್‌ನಲ್ಲಿ ಇರಿಸಲಾಗಿದ್ದ ಬರೋಬ್ಬರಿ 50 ಗ್ರಾಂಗೂ ಅಧಿಕ ತೂಕದ 10 ಚಿನ್ನದ ಉಂಗುರಗಳು ಹಾಗೂ 3 ಚಿನ್ನದ ಸರಗಳು ಒಂದೊಂದಾಗಿ ನಾಪತ್ತೆಯಾಗಿದ್ದವು. ಇವುಗಳ ಒಟ್ಟು ಮೌಲ್ಯ ಸುಮಾರು ₹10 ಲಕ್ಷ ಎಂದು ಅಂದಾಜಿಸಲಾಗಿದೆ. ಚಿನ್ನಾಭರಣ ಕಳುವಾಗಿರುವುದನ್ನು ಗಮನಿಸಿದ ಮಾಲೀಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು.
ಸಿಸಿಟಿವಿ ತನಿಖೆಯಲ್ಲಿ ಬಯಲಾದ ಕಿಲಾಡಿ 'ಖದೀಮ'
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜ್ಯುವೆಲರಿ ಶಾಪ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಯಾರ ಕಣ್ಣಿಗೂ ಬೀಳದಂತೆ ಪ್ರದರ್ಶನಕ್ಕೆ ಇಟ್ಟಿದ್ದ ಹಾಗೂ ಕೌಂಟರ್‌ನಲ್ಲಿದ್ದ ಚಿನ್ನದ ಒಡವೆಗಳನ್ನು ಇಲಿಯೊಂದು ಬಾಯಲ್ಲಿ ಕಚ್ಚಿಕೊಂಡು ಹೋಗಿ ತನ್ನ ಬಿಲದೊಳಗೆ ಬಚ್ಚಿಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಬಿಲ ತೋಡಿದಾಗ ಸಿಕ್ಕಿತು 'ಖಜಾನೆ'
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಾಗೂ ಅಂಗಡಿ ಸಿಬ್ಬಂದಿ ಇಲಿಯ ಬಿಲವನ್ನು ಪರಿಶೀಲಿಸಿ, ಅಗೆದು ನೋಡಿದಾಗ ಒಳಗಿದ್ದ 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ. ಸುರಕ್ಷಿತವಾಗಿ ಎಲ್ಲ ಒಡವೆಗಳನ್ನು ಹೊರತೆಗೆದು ಮಾಲೀಕರಿಗೆ ಒಪ್ಪಿಸಲಾಗಿದೆ.