ಮಂಡ್ಯ: ಮಂಡ್ಯದಲ್ಲಿ ಸಾವಿರಾರು ರೈತರು ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆಸುತ್ತಿರುವುದರ ಮಧ್ಯೆಯೇ ಸಾಲ ಬಾಧೆ ತಾಳಲಾರದೆ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮಂಡ್ಯ ತಾಲ್ಲೂಕಿನ ಹಟ್ನ ಬೇವುಕಲ್ಲು ಗ್ರಾಮದಲ್ಲಿ ಗುರುವಾರ ಒಂದೇ ಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರನ್ನು ಪುಟ್ಟಸ್ವಾಮಿ (58) ಮತ್ತು ಅವರ ಪತ್ನಿ ನಾಗಮ್ಮ (55) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ದಂಪತಿಗಳು ಐದು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು ಮತ್ತು ಕೃಷಿಗಾಗಿ ಬ್ಯಾಂಕಿನಿಂದ ಸುಮಾರು 10 ಲಕ್ಷ ರೂ. ಸಾಲ ಪಡೆದಿದ್ದರು.
ಮಳೆಯ ಕೊರತೆಯಿಂದಾಗಿ ಅವರ ಬೆಳೆ ಒಣಗಿ ಹೋಗಿದ್ದವು ಮತ್ತು ಸಾಲ ಮರುಪಾವತಿಸಲು ಅವರಿಗೆ ಸಾಧ್ಯವಾಗದ ಕಾರಣ ಕಠಿಣ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ರಾಜ್ಯ ಸರ್ಕಾರ ಸಮಸ್ಯೆ ಪರಿಹರಿಸಬೇಕು
ಏತನ್ಮಧ್ಯೆ, ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಘಟನೆಯನ್ನು "ತೀವ್ರ ದುರದೃಷ್ಟಕರ ಮತ್ತು ಹೃದಯವಿದ್ರಾವಕ" ಎಂದಿದ್ದಾರೆ. ಅಲ್ಲದೆ ರೈತರ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪುಟ್ಟಸ್ವಾಮಿ ಮತ್ತು ನಾಗಮ್ಮ ಅವರ ಆತ್ಮಹತ್ಯೆ ರಾಜ್ಯದಲ್ಲಿ ರೈತರು ಎದುರಿಸುತ್ತಿರುವ "ತೀವ್ರ ಸಂಕಷ್ಟ"ವನ್ನು ಪ್ರತಿಬಿಂಬಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
"ಅವರು ಸುಮಾರು ಐದು ಎಕರೆ ಭೂಮಿಯಲ್ಲಿ ಟೊಮೆಟೊ ಮತ್ತು ಇತರ ತರಕಾರಿಗಳನ್ನು ಬೆಳೆದಿದ್ದರೂ, ಅವರು ನಿರಂತರ ಬೆಳೆ ನಷ್ಟವನ್ನು ಅನುಭವಿಸಿದ್ದಾರೆ ಮತ್ತು ಸುಮಾರು 10-15 ಲಕ್ಷ ರೂ. ಸಾಲ ಮಾಡಿದ್ದರು ಎಂದು ವರದಿಯಾಗಿದೆ. ಸಾಲದ ಮೇಲಿನ ಬಡ್ಡಿಯನ್ನು ಸಹ ಮರುಪಾವತಿಸಲು ಸಾಧ್ಯವಾಗದೆ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದರು.
ಆದರೆ ಯಾವುದೇ ಸಂಕಷ್ಟ ಬಂದರೂ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಹೋಗಬಾರದು ಎಂದು ವಿಜಯೇಂದ್ರ ಮನವಿ ಮಾಡಿದರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ರೈತರಿಗೆ ಕರೆ ನೀಡಿದರು.
ಬಿಜೆಪಿ ತಂಡಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿವೆ. ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿಜಯೇಂದ್ರ ಹೇಳಿದರು.