ಬೆಂಗಳೂರು: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಹಾರೋಹಳ್ಳಿಗೆ ಆಗಮಿಸಿದ ಡಿ ಕೆ ಶಿವಕುಮಾರ್ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕನಕಪುರಕ್ಕೆ ಅವರು ಕೈಗೊಂಡ ಮೊದಲ ಭೇಟಿ ಇದಾಗಿದ್ದು, ಇದನ್ನು “ಕೃತಜ್ಞತಾ ಯಾತ್ರೆ” ಎಂದು ಕರೆಯಲಾಗಿದೆ.
ಇದಕ್ಕೂ ಮುನ್ನ ಇಂದು ಭಾನುವಾರ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಜೀರೋ ಟ್ರಾಫಿಕ್ ತಪ್ಪಿಸಲು ಬೆಂಗಳೂರಿನ ತಮ್ಮ ನಿವಾಸದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಡಿ ಕೆ ಶಿವಕುಮಾರ್ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.
ಮೆಟ್ರೋ ರೈಲಿಗೆ ಏರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಜನರು ನನ್ನನ್ನು ದೊಡ್ಡಾಲಹಳ್ಳಿಯಿಂದ ಇಲ್ಲಿಯವರೆಗೆ ಕರೆತಂದಿದ್ದಾರೆ. ದೊಡ್ಡಾಲಹಳ್ಳಿ, ಸಾತನೂರು, ಕನಕಪುರ ಮತ್ತು ಬೆಂಗಳೂರು ದಕ್ಷಿಣ ಭಾಗದ ಜನರ ಬೆಂಬಲದಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಮುಖ್ಯಮಂತ್ರಿ ಆದ ನಂತರ ನನ್ನನ್ನು ನೋಡಲು ಅಲ್ಲಿನ ಜನರು ಬಯಸಿದ್ದರು. ಆದರೆ ಅವರಿಗೆ ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿಗೆ ಬಾರದಂತೆ ನಾನು ಅವರಲ್ಲಿ ಮನವಿ ಮಾಡಿಕೊಂಡಿದ್ದೆ,” ಎಂದು ಹೇಳಿದರು.
ನಾನು ಅವರನ್ನೇ ಭೇಟಿ ಮಾಡಲು ಬರುತ್ತೇನೆ ಎಂದು ಹೇಳಿದ್ದೆ. ಆದ್ದರಿಂದ ನನ್ನ ಮೊದಲ ಭೇಟಿ ನನ್ನ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿದೆ. ಕಳೆದ 40 ವರ್ಷಗಳಿಂದ ನನ್ನನ್ನು ರಾಜಕೀಯವಾಗಿ ಬೆಳೆಸಿದ ಜನರಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ ಎಂದು ಅವರು ಹೇಳಿದರು.
ಇಂದಿನ ಭೇಟಿಯ ವೇಳೆ ಸುಮಾರು 20 ರಿಂದ 25 ಸ್ಥಳಗಳಲ್ಲಿ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ ಅವರು, ಜನರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸುತ್ತೇನೆ. ಅಲ್ಲಿನ ಜನರು ರಾಜಕೀಯ ಪ್ರಜ್ಞೆ ಹೊಂದಿದ್ದಾರೆ. ಅವರಿಗೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯ ಎಂದರು.
ಮೆಟ್ರೊ ಪ್ರಯಾಣ ವೇಳೆ ಡಿ ಕೆ ಶಿವಕುಮಾರ್ ಅವರು ಸಹಪ್ರಯಾಣಿಕರನ್ನು ಅಭಿನಂದಿಸಿ, ಅವರೊಂದಿಗೆ ಸಂವಾದ ನಡೆಸಿದರು.
ಡಿ ಕೆ ಶಿವಕುಮಾರ್ ಅವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯ ಕೊನೆಯ ಮೆಟ್ರೋ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕನಕಪುರಕ್ಕೆ ತೆರಳಿದರು. ಹಾರೋಹಳ್ಳಿಗೆ ಬಂದಿಳಿದ ನಂತರ ಜನತೆಯನ್ನುದ್ದೇಶಿಸಿ ಡಿ ಕೆ ಶಿವಕುಮಾರ್ ಮಾತನಾಡಿದ ತಮ್ಮ ಹೃದಯಾಂತರಾಳದ ಧನ್ಯವಾದವನ್ನು ಕ್ಷೇತ್ರದ ಜನತೆಗೆ ತಿಳಿಸಿದರು.
ಇಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಹಾರೋಹಳ್ಳಿ ಸೇರಿದಂತೆ ಕನಕಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ, ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು 13 ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ
ನೀವು ಗೆಲ್ಲಿಸಿದ್ದಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮುಖ್ಯಮಂತ್ರಿ ಆಗಿದ್ದರೂ ನಾನು ನಿಮ್ಮ ಸೇವಕ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಫಲವಾಗಿದ್ದೇನೆ. ನಿಮ್ಮ ಏನೇ ಸಮಸ್ಯೆ ಇದ್ದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದರು. ನನ್ನ ಮೇಲೆ ವಿಶ್ವಾಸ ಇಟ್ಟು ಇಕ್ಬಾಲ್ ಹುಸೇನ್ರನ್ನು ಗೆಲ್ಲಿಸಿದ್ದೀರಿ. ಇಕ್ಬಾಲ್ ಹುಸೇನ್ ಹೆಸರಿಗೆ ಮಾತ್ರ, ರಾಮನಗರಕ್ಕೆ ನಾನೇ ಶಾಸಕ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿದ್ದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಯಿತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋದಕ್ಕೆ ಕೆಲವರು ವಿರೋಧಿಸಿದರು. ಜಿಲ್ಲೆಯ ಹೆಸರು ಬದಲಾವಣೆಯಿಂದ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಹಾರೋಹಳ್ಳಿ ಅಭಿವೃದ್ಧಿಗೆ ಪ್ರತ್ಯೇಕ ಮೀಟಿಂಗ್ ಮಾಡುತ್ತೇನೆ. ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುತ್ತೇವೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದವರಿಗೂ ಅನುಕೂಲವಾಗುತ್ತದೆ. ಇಲ್ಲಿನ ಜನರು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುತ್ತೇವೆ. ಉತ್ತಮ ವಿದ್ಯಾಭ್ಯಾಸ ಇಲ್ಲೇ ದೊರಕುವಂತೆ ಮಾಡುತ್ತೇವೆ ಎಂದರು.
ದೇವರು ಅವಕಾಶ ಮಾತ್ರ ಕೊಡುತ್ತಾನೆ
ಇನ್ನು ಬಿಜೆಪಿ ದೂರ ಇಡಬೇಕು ಎಂದು ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದೆ. ಜೆಡಿಎಸ್ ಪಕ್ಷದವರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ತೆಗೆದಿದೆ. ದೇವರು ವರ, ಶಾಪ ಕೊಡಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ಮುಂದಿನ ಬಾರಿ 136 ಸೀಟ್ಗಿಂತಲೂ ಹೆಚ್ಚು ಬೆಂಬಲ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಕೇಳಿಕೊಂಡರು.