ಸಂಗ್ರಹ ಚಿತ್ರ 
ರಾಜ್ಯ

ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ 'Smart card' ವಿತರಣೆ, ಪ್ರಯಾಣದ ವೇಳೆ ಇನ್ಮುಂದೆ Aadhar card ತೋರಿಸುವ ಟೆನ್ಷನ್ ಇರಲ್ಲ..!

ಪ್ರಸ್ತುತ ‘ಶಕ್ತಿ’ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿಗಳನ್ನು ತೋರಿಸಬೇಕಾಗಿರುವುದರಿಂದ ಹಲವಾರು ಬಾರಿ ಗೊಂದಲ ಹಾಗೂ ವಿಳಂಬ ಉಂಟಾಗುತ್ತಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆ ಜಾರಿಯಾಗಲಿದೆ. ಈ ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಬಸ್ ಪ್ರಯಾಣದ ವೇಳೆ ಆಧಾರ್ ಕಾರ್ಡ್ ತೋರಿಸುವ ತೊಂದರೆ ತಪ್ಪಲಿದೆ.

ರಾಜ್ಯದ ಮೂರು ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಸರ್ಕಾರ ವಿತರಿಸಲಿದ್ದು, ಇದರಿಂದ ದಿನನಿತ್ಯ ನಿರ್ವಾಹಕರಿಗೆ ಭೌತಿಕ ಗುರುತಿನ ಚೀಟಿ ತೋರಿಸುವ ಗೊಂದಲಗಳು ನಿವಾರಣೆಯಾಗಲಿದೆ.

ಸೋಮವಾರ ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೈರತಿ ಸುರೇಶ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ರಾಜ್ಯದ ಮೂರು ಕೋಟಿಗೂ ಅಧಿಕ ಜನರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪುರುಷರು ಮೆಟ್ರೋ ಕಾರ್ಡ್ ಮಾದರಿಯಲ್ಲಿ ಶುಲ್ಕ ಪಾವತಿಸಿ ಕಾರ್ಡ್ ಪಡೆಯಬಹುದಾಗಿದೆ. ಕಾರ್ಡ್‌ನಲ್ಲಿರುವ ಮೊತ್ತ ಮುಗಿದ ಬಳಿಕ ಮರುರಿಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯೂ ಇರಲಿದೆ ಎಂದು ಮಾಹಿತಿ ನೀಡಿದರು.

ಮೂರು ಕೋಟಿಗೂ ಹೆಚ್ಚು ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸಬೇಕಿರುವ ಹಿನ್ನೆಲೆಯಲ್ಲಿ ಸರ್ಕಾರ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಿದೆ. ಪೈಲಟ್ ಯೋಜನೆಯಡಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮುಖ್ಯ ಕಚೇರಿಗೆ ಭೇಟಿ ನೀಡಿ, ಕೆಎಸ್‌ಆರ್‌ಟಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಸಂಸ್ಥೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಕಾರ್ಯವೈಖರಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸಚಿವರು ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನಜೀವನವನ್ನು ಉತ್ತಮಗೊಳಿಸಿವೆ. ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದು, ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಸುಮಾರು 40 ಶೇಕಡಾ ಹೆಚ್ಚಾಗಿದೆ ಎಂದು ತಿಳಿಸಿದರು.

ಪ್ರಸ್ತುತ ‘ಶಕ್ತಿ’ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿಗಳನ್ನು ತೋರಿಸಬೇಕಾಗಿರುವುದರಿಂದ ಹಲವಾರು ಬಾರಿ ಗೊಂದಲ ಹಾಗೂ ವಿಳಂಬ ಉಂಟಾಗುತ್ತಿದೆ.

ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಬಸ್ ಹತ್ತುವಾಗ ಪರ್ಸ್‌ನಲ್ಲಿ ಆಧಾರ್ ಕಾರ್ಡ್ ಹುಡುಕುವ ಪರಿಸ್ಥಿತಿ ಎದುರಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರುತ್ತಿದ್ದು, ಈ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೆ ಬಂದರೆ ಮಹಿಳೆಯರ ಬಸ್ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಗೆ ಅಡ್ಡ ಮತದಾನದ ಭೀತಿ; ಕೈ ಶಾಸಕರು ಬೆಂಗಳೂರಿಗೆ ಶಿಫ್ಟ್!

'ಮಮತಾ ಕೈಯಿಂದ ಜಾರುತ್ತಿದೆ TMC': ಸಿಎಂ ಸುವೇಂದು ಸಭೆಯಲ್ಲಿ ಭಿನ್ನಮತೀಯ ಸಂಸದರು ಭಾಗಿ!

Pakistan-Occupied Kashmir: JAAC ಬ್ಯಾನ್ ಬಳಿಕ ಭುಗಿಲೆದ್ದ ಹಿಂಸಾಚಾರ, 11 ಜನರ ಸಾವು!

ದ್ವೇಷದ ಕಾರ್ಖಾನೆಯಿಂದ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ, ಹತ್ಯಾಕಾಂಡವನ್ನು ಸೇನಾ ಕಾರ್ಯಾಚರಣೆ ಎಂದರೆ ಪಾಪ ಕಳೆಯಲ್ಲ: Pak ವಿರುದ್ಧ ಭಾರತ ಗುಡುಗು

ಯಾಕಿಷ್ಟು ಚಿಂತಿತರಾಗಿದ್ದೀರಿ? RSS ನೋಂದಣಿಗಾಗಿ ದಾಖಲೆ ಸಿದ್ಧವಾಗಿಡಲು ಹೇಳಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

SCROLL FOR NEXT