ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಅವಹೇಳನಕಾರಿ ಮಾಹಿತಿ ಹಂಚಿಕೆ ಮಾಡಿದ ಆರೋಪದ ಮೇಲೆ ಕೆಲವು ಫೇಸ್‌ಬುಕ್ ಖಾತೆಗಳ ನಿರ್ವಾಹಕರ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜೂನ್ 20ರಂದು ವಕೀಲ ದೀಪು ಸಿ.ಆರ್. ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ.
ಎಫ್‌ಐಆರ್ ಪ್ರಕಾರ, ಜೂನ್ 17ರಂದು 'Kumaraswamy for CM' ಹಾಗೂ 'Janata Dal Secular' ಹೆಸರಿನ ಫೇಸ್‌ಬುಕ್ ಖಾತೆಗಳಲ್ಲಿ "ಹಳೆಯ ಚಾಳಿ ಮತ್ತೆ ಆರಂಭ; ಹುಟ್ಟುಗುಣ ಸುಟ್ಟಲೂ ಹೋಗಲ್ಲ ಎಂಬ ಶೀರ್ಷಿಕೆಯಡಿ ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 192ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೋಸ್ಟ್‌ಗಳ ಮೂಲ, ಅವುಗಳನ್ನು ಪ್ರಕಟಿಸಿದ ವ್ಯಕ್ತಿಗಳು ಹಾಗೂ ಅದರ ಹಿಂದಿರುವ ಉದ್ದೇಶದ ಕುರಿತು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಈ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಾಹಕರನ್ನು ಗುರುತಿಸುವ ಕಾರ್ಯವನ್ನು ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.