ಬೆಂಗಳೂರು: ಶೆಡ್‌ವೊಂದರಲ್ಲಿ ದಾಖಲೆ ಇಲ್ಲದೆ ಸಂಗ್ರಹಿಸಲಾಗಿದ್ದ ಸುಮಾರು 3 ಕೋಟಿ ನಗದು ಪತ್ತೆಯಾಗಿದ್ದು, ಬೆಂಗಳೂರು ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ ಸಾಲ ತೀರಿಸಲು ಹಣ ತಂದಿರುವುದಾಗಿ ಮಾಲೀಕರು ಹೇಳುತ್ತಿದ್ದು ಯಾವುದೇ ದಾಖಲೆಗಳನ್ನು ನೀಡದ ಹಿನ್ನೆಲೆ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಕುರುಬರಹಳ್ಳಿಯಲ್ಲಿರುವ ಶೆಡ್‌ವೊಂದರಲ್ಲಿ ಈ ಹಣ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಾವರೆಕೆರೆ ನಿವಾಸಿ ನಾಗರಾಜ್ ಎಂಬುವರಿಗೆ ಈ ಹಣ ಸೇರಿದ್ದು ಎನ್ನಲಾಗಿದೆ. ನಾಗರಾಜ್ ಅವರ ಸ್ನೇಹಿತ ವೆಂಕಟೇಶ್ ಅವರಿಗೆ ಸೇರಿದ ಶೆಡ್‌ನಲ್ಲಿ ಹಣ ಸಂಗ್ರಹಿಸಲಾಗಿತ್ತು. ಗುಪ್ತ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಆದಾಯ ತೆರಿಗೆ (IT) ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.