ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ ಗಗನಯಾನ ಮಿಷನ್ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿದ್ದು, 2027ರ ಮೂರನೇ ತ್ರೈಮಾಸಿಕದಲ್ಲಿ ಮೊದಲ ಉಡಾವಣೆ ನಡೆಸುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಹಾಗೂ ಕೇಂದ್ರ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ವಿ. ನಾರಾಯಣನ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮ್ಯಾನೇಜ್ಮೆಂಟ್ ಅಕಾಡೆಮಿಯಲ್ಲಿ ವಾಯುಪಡೆಯ ಸಂಘ (ಕರ್ನಾಟಕ) ಆಯೋಜಿಸಿದ್ದ 17 ನೇ ವಾರ್ಷಿಕ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ನಾರಾಯಣನ್ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
"ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ: ಸವಾಲುಗಳು ಮತ್ತು ಮುಂದಿನ ದಾರಿ" ವಿಷಯದ ಕುರಿತು ಮಾತನಾಡಿದ ಅವರು, ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ 8,000ಕ್ಕೂ ಹೆಚ್ಚು ನೆಲಮಟ್ಟದ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಹೇಳಿದರು.
ಪ್ರಸ್ತುತ ಗಗನಯಾನ ಯೋಜನೆಯ ಮೊದಲ ಮಾನವರಿಲ್ಲದ (Uncrewed) ಮಿಷನ್‌ಗಾಗಿ ಸಿದ್ಧತೆಗಳು ನಡೆಯುತ್ತಿವೆ. ಬಳಿಕ ಮಾನವ ಸಹಿತ ಉಡಾವಣೆಯನ್ನು 2027ರ ಮೂರನೇ ತ್ರೈಮಾಸಿಕದಲ್ಲಿ ನಡೆಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ತಿಳಿಸಿದರು.
ಇದೇ ವೇಳೆ ಇಸ್ರೋ ಹಾಗೂ HAL ನಡುವಿನ ಸಹಭಾಗಿತ್ವವನ್ನು ಉಲ್ಲೇಖಿಸಿದ ನಾರಾಯಣನ್, HALನ ಬೆಂಬಲವಿಲ್ಲದೆ ಇಸ್ರೋಗೆ ಉಡಾವಣಾ ವಾಹಕಗಳನ್ನು ನಿರ್ಮಿಸಲು ಹಾಗೂ ಉಪಗ್ರಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಇಸ್ರೋ ಸಾಧನೆಗಳ ಕುರಿತು ಮಾಹಿತಿ ನೀಡಿದ ಅವರು, ಸಂಸ್ಥೆ ಆರಂಭವಾದ ನಂತರ ಇದುವರೆಗೆ 4,020 ಸೌಂಡಿಂಗ್ ರಾಕೆಟ್‌ಗಳ ಉಡಾವಣೆ, 105 ಉಡಾವಣಾ ವಾಹಕ ಮಿಷನ್‌ಗಳು ಹಾಗೂ 135 ಉಪಗ್ರಹ ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಕಳೆದ ಒಂದು ದಶಕದಲ್ಲಿ ಇಸ್ರೋ ಒಟ್ಟು 463 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಅವುಗಳಲ್ಲಿ 399 ವಿದೇಶಿ ಉಪಗ್ರಹಗಳು ಸೇರಿವೆ. ಅಲ್ಲದೆ, 2025-26 ಹಣಕಾಸು ವರ್ಷದಲ್ಲಿ 60ಕ್ಕೂ ಹೆಚ್ಚು ಪ್ರಮುಖ ಪರೀಕ್ಷೆಗಳು ಹಾಗೂ ತಂತ್ರಜ್ಞಾನ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
2006ರಿಂದ 2015ರ ಅವಧಿಗೆ ಹೋಲಿಸಿದರೆ, 2015ರಿಂದ 2026ರ ಅವಧಿಯಲ್ಲಿ ಇಸ್ರೋ ನಡೆಸಿದ ಬಾಹ್ಯಾಕಾಶ ಮಿಷನ್‌ಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದೂ ವಿವರಿಸಿದರು.
ನಿವೃತ್ತ ಏರ್ ಮಾರ್ಷಲ್ ಎಚ್.ಬಿ. ರಾಜಾರಾಮ್ ಮಾತನಾಡಿ, ಭಾರತೀಯ ವಾಯುಪಡೆ ಹಾಗೂ HALನಲ್ಲಿ 42 ವರ್ಷಗಳ ಸೇವೆ ಸಲ್ಲಿಸಿದ್ದ ಏರ್ ಚೀಫ್ ಮಾರ್ಷಲ್ ಎಲ್.ಎಂ. ಕತ್ರೆ ಅವರು ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು.