ಬೆಂಗಳೂರು: ಬಿಯರ್ ದರದ ವಿಚಾರಕ್ಕೆ ಹುಟ್ಟಿಕೊಂಡ ಮಾತಿನ ಚಕಮಕಿ ಬಳಿಕ ತಾರಕಕ್ಕೇರಿ ಪರಸ್ಪರ ಹಿಂಸಾತ್ಮಕ ತಿರುವು ಪಡೆದ ಘಟನೆ ಬೆಂಗಳೂರಿನ ನಾಗರಭಾವಿಯ ಬಾರ್ ನಲ್ಲಿ ನಡೆದಿದೆ.
ಹೌದು.. ಬೆಂಗಳೂರಿನ ನಾಗರಭಾವಿಯ ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲೇನಿಯಂ ಬಾರ್‌ನಲ್ಲಿ ಶನಿವಾರ ಸಂಜೆ ಭಾರಿ ಗಲಾಟೆ ನಡೆದಿದೆ.
ಮದ್ಯದ ಬೆಲೆ ಏರಿಕೆ ವಿಚಾರವಾಗಿ ಉಂಟಾದ ವಾಗ್ವಾದವು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಘಟನೆ ವೇಳೆ ಯುವಕರ ಗುಂಪೊಂದು ಬಾರ್ ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಸುಮಾರು 7 ಗಂಟೆಗೆ ಈ ಘಟನೆ ನಡೆದಿದ್ದು, ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮಿಲೇನಿಯಂ ಬಾರ್‌ಗೆ ಬಂದಿದ್ದ ಕೆಲ ಗ್ರಾಹಕರು ಮದ್ಯದ ಬೆಲೆ ಹೆಚ್ಚಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ಗ್ರಾಹಕರು ಮತ್ತು ಬಾರ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೆಲವೇ ಕ್ಷಣಗಳಲ್ಲಿ ತೀವ್ರ ವಾಗ್ವಾದಕ್ಕೆ ತಿರುಗಿತು.
ಇದೇ ವೇಳೆ ಬಾರ್‌ನೊಳಗೆ ಮತ್ತೊಂದು ಗ್ರಾಹಕರ ಗುಂಪಿನ ನಡುವೆಯೂ ಜಗಳ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಮಾತಿನ ಚಕಮಕಿ ಬಳಿಕ ಎರಡೂ ಕಡೆಯವರ ನಡುವೆ ಹಲ್ಲೆ-ಪ್ರತಿಹಲ್ಲೆ ಆರಂಭವಾಗಿ ಬಾರ್‌ನೊಳಗೆ ಭಾರೀ ಗಲಾಟೆ ಉಂಟಾಯಿತು.
ಪೊಲೀಸರ ಪ್ರಕಾರ, ಪರಿಸ್ಥಿತಿ ನಿಯಂತ್ರಣ ತಪ್ಪಿದಾಗ ಯುವಕರ ಗುಂಪು ಬಿಯರ್ ಬಾಟಲಿಗಳಿಂದ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತು. ಸಿಬ್ಬಂದಿಯನ್ನು ಬಾಟಲಿಗಳಿಂದ ಹೊಡೆದು, ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯನ್ನು ತಡೆಯಲು ಹಾಗೂ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದ ಕೆಲ ಗ್ರಾಹಕರ ಮೇಲೂ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಏಕಾಏಕಿ ನಡೆದ ಈ ಹಿಂಸಾಚಾರದಿಂದ ಬಾರ್‌ನಲ್ಲಿದ್ದ ಇತರ ಗ್ರಾಹಕರು ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾ ಲೇಔಟ್ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದು, ಗಲಾಟೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ.