ರಾಜ್ಯ

News wrap 03-03-2026| Abu Dhabi ಯಲ್ಲಿ ಸಿಲುಕಿದ್ದ 213 ಕನ್ನಡಿಗರು ಬೆಂಗಳೂರಿಗೆ ವಾಪಸ್; ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆ: MK Stalin ಗೆ ಸಿದ್ದರಾಮಯ್ಯ ಬೆಂಬಲ

Israel Iran War Abudhabi ದಲ್ಲಿ ಸಿಲುಕಿದ್ದ 213 ಕನ್ನಡಿಗರು ಬೆಂಗಳೂರಿಗೆ ವಾಪಸ್

ಅಮೆರಿಕಾ-ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇರಾನ್‌ ಪರಿಸ್ಥಿತಿ ತೀವ್ರಗೊಂಡು ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ತಾಯ್ನಾಡಿಗೆ ಮರಳಿದವರಲ್ಲಿ ಕರ್ನಾಟಕದ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ) ಭೋಜೇಗೌಡ ಹಾಗೂ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಕೂಡ ಸೇರಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಆತಂಕದ ಕ್ಷಣಗಳನ್ನು ಹಂಚಿಕೊಂಡ ಎಂಎಲ್ಸಿ ಭೋಜೇಗೌಡ, ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಸೇರಿತ್ತು. ಎಲ್ಲರ ಮುಖದಲ್ಲೂ ಯುದ್ಧದ ಭಯ ಎದ್ದು ಕಾಣುತ್ತಿತ್ತು ಕಠಿಣ ಸಮಯದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಲ್ಲದೆ, ದುಬೈನಲ್ಲಿ ಸುರಕ್ಷಿತ ಹೋಟೆಲ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು ಎಂದು ಹೇಳಿದ್ದಾರೆ.

Bengaluru: ಮನೆಯಲ್ಲಿ ಬೆಂಕಿ ಅವಗಢ ಮಹಿಳೆ ಸಾವು

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಕಂಟ್ರ್ಯಾಕ್ಟರ್ ರಮೇಶ್ ಬಾಬು ಅವರ ನಾಲ್ಕು ಅಂತಸ್ತಿನ ಮನೆಯಲ್ಲಿ ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ರಮೇಶ್ ಬಾಬು ಅವರ ಪತ್ನಿ 53 ವರ್ಷದ ಸವಿತಾ ಸಜೀವ ದಹನಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಮೇಶ್ ಬಾಬು, ಅವರ ತಾಯಿ ಸಣ್ಣಮ್ಮ ಹಾಗೂ ಮಗನನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕರ್ನಾಟಕ ಬೆಂಬಲ- ತಮಿಳುನಾಡು ಸಿಎಂ Stalin ಗೆ ಸಿದ್ದರಾಮಯ್ಯ ಪತ್ರ

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ, ಕೇಂದ್ರ- ರಾಜ್ಯಗಳ ಸಂಬಂಧಗಳ ಬಗ್ಗೆ ರಾಷ್ಟ್ರಮಟ್ಟದ ಹೊಸ ಚರ್ಚೆಗೆ ಕರ್ನಾಟಕ ಬೆಂಬಲಿಸಲಿದೆ ಎಂದು ಸ್ಟಾಲಿನ್ ಗೆ ಬರೆದಿರುವ ಪತ್ರದಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ. ರಾಜ್ಯಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನು ಪೂರೈಸಲು ಅಧಿಕಾರ ಮತ್ತು ಹಣಕಾಸಿನ ಅಗತ್ಯವಿರುತ್ತದೆ ಎಂದು ಸಿಎಂ ಹೇಳಿದ್ದಾರೆ.

DK Shivakumar ಬೆಂಬಲಿಗರ ಫೋನ್ ಕದ್ದಾಲಿಕೆ: ಸಿದ್ದರಾಮಯ್ಯ ವಿರುದ್ಧ ಆರ್  ಅಶೋಕ್, ಹೆಚ್ ಡಿ ಕುಮಾರಸ್ವಾಮಿ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕ.ಶಿವಕುಮಾರ್ ಬೆಂಬಲಿಗರ ಫೋನ್'ಗಳನ್ನು ಕದ್ದಾಲಿಕೆ ನಡೆಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ.ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿದ್ದರಾಮಯ್ಯ ಅವರು ಎಸ್'ಪಿ ನೇತೃತ್ವದಲ್ಲಿ ಅನಧಿಕೃತ ತಂಡ ರಚಿಸಿದ್ದಾರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಒಡೆದ ಮನೆಯಾಗಿದ್ದು, ಸರ್ಕಾರದ ಅವಧಿ ಅಂತ್ಯದತ್ತ ಸಾಗುತ್ತಿದೆ ಎಂದು ಟೀಕಿಸಿದರು. ಫೋನ್ ಟ್ಯಾಪಿಂಗ್ ಪ್ರತಿಯೊಂದು ಸರ್ಕಾರದಲ್ಲೂ ಇತ್ತು, ಮತ್ತು ಇಂದಿಗೂ ಇದೆ. ಆದರೆ, ಕೆಲವರು ಅದರಲ್ಲಿ ತೊಡಗಿಸಿಕೊಂಡಿದ್ದರೂ ಸದ್ಗುಣಶೀಲ ರಂತೆ ವರ್ತಿಸುತ್ತಾರೆ. ಇತ್ತೀಚೆಗೆ ಇದು ಎಷ್ಟು ಹೆಚ್ಚಾಗಿದೆ ಎಂದು ಅವರನ್ನೇ ಕೇಳಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಿಎಂ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘‘ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ವ್ಯಂಗ್ಯವಾಡಿದ್ದಾರೆ.

ಮಸೀದಿ ಬಳಿ ಬಾಂಬ್ ಸ್ಫೋಟ ಬೆದರಿಕೆ: ಆರೋಪಿ ವಿರುದ್ಧ ಉಳ್ಳಾಲ ಪೊಲೀಸರ ಸ್ವಯಂಪ್ರೇರಿತ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪ್ರದೇಶದ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ, ಸಪೋರ್ಟ್ ಮಾಡಿ’ ಎಂದು ಶಂಕರ್11916 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಈ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತನಾಗಿ ಗುರುತಿಸಿಕೊಂಡು ಕೊಲೆಯಾಗಿದ್ದ ಸುಹಾಸ್ ಶೆಟ್ಟಿ ಅವರ ಭಾವಚಿತ್ರ ಹೊಂದಿದ್ದ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಇದರಿಂದಾಗಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರು, ಕಮೆಂಟ್ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲು ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರ್ವೋಚ್ಚ ನಾಯಕನ ಆಯ್ಕೆಗಾಗಿ 88 ಸದಸ್ಯರು ಸೇರಿದ್ದ ಕಟ್ಟಡ ಧ್ವಂಸಗೈದ ಇಸ್ರೇಲ್; 9 ಸಾವಿರ ಕೋಟಿಯ ಅಮೆರಿಕದ ರೇಡಾರ್ ಧ್ವಂಸ!

'ತುಂಬಾ ಲೇಟ್ ಆಯಿತು': ಇರಾನ್​ ಮಾತುಕತೆ ಪ್ರಸ್ತಾಪಕ್ಕೆ ಟ್ರಂಪ್ ತಿರುಗೇಟು

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

"ನೀವು ವಾಸಿಸುವ ರಾಷ್ಟ್ರವನ್ನು ಬೆಂಬಲಿಸಿ ಅಥವಾ...": ಇರಾನ್-ಇಸ್ರೇಲ್ ಯುದ್ಧದ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಪೋಸ್ಟ್ ವೈರಲ್

ಯುದ್ಧದಲ್ಲಿ ಭಾಗಿಯಾಗದಂತೆ ಯುರೋಪಿಯನ್ ದೇಶಗಳಿಗೆ ಇರಾನ್ ಎಚ್ಚರಿಕೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ

SCROLL FOR NEXT