ಬೆಂಗಳೂರು: ಕರ್ನಾಟಕವು ದೇಶದ ಅತಿ ವೇಗದಲ್ಲಿ ಪ್ರಗತಿ ಕಾಣುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಗಳಿಸಿರುವ ರಾಜಧಾನಿ ಹೊಂದಿರುವ ಕರ್ನಾಟಕ, ತಂತ್ರಜ್ಞಾನ ಅಳವಡಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ ಮಾದರಿಯಾಗಿರುವ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಈಗಲೂ ಮೊಬೈಲ್ ನೆಟ್ವರ್ಕೇ ಇಲ್ಲದಂತಹ ಪರಿಸ್ಥಿತಿಯಿದೆ.
ಹೌದು, ಕರ್ನಾಟಕ ಹೊಸತನ, ಆಧುನಿಕ ತಂತ್ರಜ್ಞಾನವನ್ನು ಬಿಗಿದಪ್ಪುವ ಪ್ರಗತಿಶೀಲ ರಾಜ್ಯವಾಗಿದೆ. ದೇಶದ ಸಿಲಿಕಾನ್ ಸಿಟಿ, ಸ್ಟಾರ್ಟ್ ಅಪ್ ಸಿಟಿ, ವೈಬ್ರೇಂಟ್ ಸಿಟಿ, ವಿಜ್ಞಾನ ಸಿಟಿ ಎಂಬ ಹಲವು ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ. ಎಲ್ಲ ಕ್ಷೇತ್ರಗಳಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಂಪದ್ಬರಿತ ರಾಜ್ಯ ಕರ್ನಾಟಕ.
ಡಿಜಿಟಲೀಕರಣ, ಕಂಪ್ಯೂಟರೀಕರಣ, ಮೊಬೈಲ್ ಬಳಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಅಗ್ರಗಣ್ಯ. ದೇಶ 5ಜಿ ಮೊಬೈಲ್ ತಂತ್ರಜ್ಞಾನ ಆಲಂಗಿಸಿಕೊಂಡಿದ್ದು, 5ಜಿ ಯುಗದಲ್ಲೂ ರಾಜ್ಯದ ಹಲವು ಹಳ್ಳಿಗಳಲ್ಲಿ ಈಗಲೂ ಮೊಬೈಲ್ ಸಂಪರ್ಕವೇ ಇಲ್ಲ. ರಾಜ್ಯದ ಹಲವಾರು ಹಳ್ಳಿಗಳು ಇನ್ನೂ ಮೊಬೈಲ್ ನೆಟ್‌ವರ್ಕ್ ಕೂಡ ಇಲ್ಲದ ಸ್ಥಿತಿಯಲ್ಲಿರುವುದು ನಂಬಲು ಅಸಾಧ್ಯವಾದ ಕಹಿ ಸತ್ಯ.
ತಂತ್ರಜ್ಞಾನ ಅಳವಡಿಕೆಯಲ್ಲಿ ಮುಚೂಣಿಯಲ್ಲಿರುವ ಕರ್ನಾಟಕದ ಹಲವು ಗ್ರಾಮಗಳು ಇನ್ನೂ ಮೊಬೈಲ್ ಸಂಪರ್ಕವನ್ನೇ ಕಂಡಿಲ್ಲ. ಕರ್ನಾಟಕದ 470 ಹಳ್ಳಿಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ ಎಂಬ ವಿಚಾರ ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆ ಮಾಹಿತಿಯಿಂದ ತಿಳಿದುಬಂದಿದೆ. ಇದರಿಂದ ದೇಶದ ಟೆಲಿಕಾಂ “ಬ್ಲಾಕ್ ಸ್ಪಾಟ್” ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದಂತಾಗಿದೆ.
ಜನವರಿ 31, 2026 ರವರೆಗೆ ಭಾರತದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ 8,985 ಹಳ್ಳಿಗಳಿವೆ. ದಕ್ಷಿಣ ಭಾರತದಲ್ಲಿ ಮೊಬೈಲ್ ಸಂಪರ್ಕವಿಲ್ಲದ ಗ್ರಾಮಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ 189 ಗ್ರಾಮಗಳು ಮೊಬೈಲ್ ನೆಟ್ ವರ್ಕ್ ಸಂಪರ್ಕವನ್ನು ಹೊಂದಿಲ್ಲದೆ, ಅಗ್ರಸ್ಥಾನದಲ್ಲಿದ್ದು, ನಂತರ ಶಿವಮೊಗ್ಗ (75), ಚಿಕ್ಕಮಗಳೂರು (40), ಚಾಮರಾಜನಗರ (25), ಬೆಳಗಾವಿ (19) ಮತ್ತು ಕಲಬುರಗಿ (18) ಜಿಲ್ಲೆಗಳು ಬರುತ್ತವೆ.
ಇನ್ನು ಕರ್ನಾಟಕದ ನಂತರದ ಸ್ಥಾನದಲ್ಲಿ ಒಡಿಶಾ (1,237), ಅರುಣಾಚಲ ಪ್ರದೇಶ (1,185), ಮಧ್ಯಪ್ರದೇಶ (960) ಮತ್ತು ಮಹಾರಾಷ್ಟ್ರ (872) ರಾಜ್ಯಗಳು ಸ್ಥಾನ ಪಡೆದಿದೆ.
ಆಂಧ್ರಪ್ರದೇಶದಲ್ಲಿ 394, ತೆಲಂಗಾಣದಲ್ಲಿ 228 ಮತ್ತು ತಮಿಳುನಾಡಿನಲ್ಲಿ ಕೇವಲ ಮೂರು ಗ್ರಾಮಗಳಲ್ಲಿ ಮಾತ್ರ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು ಕಂಡು ಬಂದಿದ್ದು, ಕೇರಳದಲ್ಲಿ ಎಲ್ಲಾ ಗ್ರಾಮಗಳೂ ಮೊಬೈಲ್ ನೆಟ್‌ವರ್ಕ್ ಹೊಂದಿವೆ ಎಂದು ತಿಳಿದುಬಂದಿದೆ.
ಗುಡ್ಡಗಾಡು ಪ್ರದೇಶ, ಕಠಿಣ ಭೌಗೋಳಿಕ ಪ್ರದೇಶ, ಅರಣ್ಯದ ಮಧ್ಯದ ಹಳ್ಳಿಗಳು, ವಾಣಿಜ್ಯ ಕಾರಣದ ಹಿನ್ನೆಲೆಯಲ್ಲಿ ಹಿಂದುಳಿರುವ ಕಾರಣ, ಈ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕೇ ಇಲ್ಲದಂತಾಗಿದೆ ಎದು ಹೇಳಲಾಗುತ್ತಿದೆ.
ಇದೇ ವೇಳೆ ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲು ಭಾರತ್ ನೆಟ್ (BharatNet) ಯೋಜನೆಯನ್ನು ಜಾರಿಗೆ ತರುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಜೊತೆಗೆ ದೇಶಾದ್ಯಂತ 4G ಸೇವೆಯನ್ನು ವಿಸ್ತರಿಸಲು ಈಗಾಗಲೇ 23,994 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದೆ.