ಪಶ್ಚಿಮ ಏಷ್ಯಾ ನಡುವಿನ ಯುದ್ಧದಿಂದಾಗಿ ಕಳೆದ ಒಂದು ವಾರದಿಂದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು ಕಾಳಸಂತೆಯಲ್ಲಿ ಮಾರಾಟ ಕುರಿತು ಗ್ರಾಹಕರಿಂದ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್, ಪಶ್ಚಿಮ ಏಷ್ಯಾ ಸಂಘರ್ಷದಿಂದ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಜನರು ಎಲ್ ಪಿಜಿ ಸಿಲಿಂಡರ್ ಗಳಿಗಾಗಿ ಪರದಾಡುತ್ತಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ಗಳ ಸಂಗ್ರಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು. ಈಮಧ್ಯೆ, ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯನ್ನು ಬಿಜೆಪಿ ರೂಪಿಸಿರುವ ಬಿಕ್ಕಟ್ಟಾಗಿದೆ ಎಂದು IT-BT ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ತಮ್ಮ ಉದ್ಯಮಿ ಸ್ನೇಹಿತರನ್ನು ಸಮಾಧಾನಪಡಿಸಲು ದೇಶದ ವಿದೇಶಾಂಗ ನೀತಿಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಹಾಕಿದ ಆರೋಪದ ಮೇಲೆ ಡಿಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 11ರಂದು ಬೆಂಗಳೂರಿನಿಂದ ರಾಯ್‌ಪುರಕ್ಕೆ ಹೋಗಬೇಕಿದ್ದ ಇಂಡಿಗೋ ವಿಮಾನ ಏರಲು ಪಶ್ಚಿಮ ಬಂಗಾಳ ಮೂಲಕ ಡಿಜೆ ರಜತೇಶ್ ಬೇರಾ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರು. ಹೀಗಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಬೇರಾ, ವಿಮಾನದೊಳಗೆ ಬಾಂಬ್ ಇದ್ದರೆ ವಿಮಾನ ನಿಲ್ಲಲ್ವಾ ಎಂದು ಹೇಳಿದ್ದರು. ಬಾಂಬ್ ಎಂಬ ಪದ ಬಳಕೆ ಮಾಡಿದ್ದರಿಂದ ಭದ್ರತಾ ಕಾಳಜಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆ ಬಳಿಕ ಬೇರಾಗೆ ಜಾಮೀನು ನೀಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದರು.
ವಿಧಾನಸಭೆಯಲ್ಲಿ ತಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡದ ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಶಾಸಕರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಚಿವ ಮಲ್ಲಿಕಾರ್ಜುನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರು. ಎಲೆಚುಕ್ಕೆ ರೋಗಕ್ಕೆ 62 ಕೋಟಿಯನ್ನ ಒದಗಿಸಿರುವುದಾಗಿ ವರದಿಯಲ್ಲಿ ಹೇಳಿದ್ದಾರೆ. ಇನ್ನು ಆಯವ್ಯಯ ಪುಸ್ತಕದಲ್ಲಿ 10,272 ರೈತರಿಗೆ ನಾವು ಪರಿಹಾರ ನೀಡಿದ್ದೇವೆ ಅಂತಾ ವರದಿಯಾಗಿದೆ. ಆದರೆ ನಿಮ್ಮ ಉತ್ತರದಲ್ಲಿ 16 ಸಾವಿರ ಅಂತಾ ಇದೆ. ಇದರಲ್ಲಿ ಯಾವುದು ಸರಿ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದರು.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪಆಯುಕ್ತ ಶ್ರೀನಿವಾಸ್ ಟಿಎಂಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದರು. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 11ರಂದು ಶ್ರೀನಿವಾಸ್ ಅವರ ನಿವಾಸ, ಕಚೇರಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳು ಸೇರಿದಂತೆ 15 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇವುಗಳಲ್ಲಿ 11 ನಿವೇಶನಗಳು, 6 ವಸತಿ ಮನೆಗಳು ಇದ್ದು ಸುಮಾರು 31 ಎಕರೆ ಕೃಷಿ ಭೂಮಿ ಸೇರಿವೆ. ಲೋಕಾಯುಕ್ತ ಪೊಲೀಸರು 2.66 ಕೋಟಿ ಮೌಲ್ಯದ ಚರಾಸ್ತಿ. 1.47 ಕೋಟಿ ಮೌಲ್ಯದ ಚಿನ್ನಾಭರಣ. ಒಟ್ಟು 25 ಲಕ್ಷ ಬ್ಯಾಂಕ್ ಠೇವಣಿ ಹಾಗೂ 72 ಲಕ್ಷ ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲ್ಲು ಕ್ವಾರಿ ಸ್ಫೋಟದಿಂದ ಮೂವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಮಾರಿಕುಪ್ಪಂ ಬಳಿ ನಡೆದಿದೆ. ಆಂಡರ್ಸನ್‌ಪೇಟೆ ಪೊಲೀಸ್ ವ್ಯಾಪ್ತಿಯ ಬಾಣಗೆರೆ ಗ್ರಾಮದ ಸರ್ವೆ ಸಂಖ್ಯೆ 139 ರಲ್ಲಿ ಬೆಳಿಗ್ಗೆ 10.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಎಸ್‌ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ. ಮಾರಿ, ಮುನಿಯಪ್ಪ ಮತ್ತು ಗೋವಿಂದ ಎಂಬುವರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದರು. ಕ್ವಾರಿಯಲ್ಲಿ ತೋಡಿದ ರಂಧ್ರಗಳಲ್ಲಿ ಸ್ಫೋಟಕ ವಸ್ತು ತುಂಬುವ ವೇಳೆ ಉಂಟಾದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ ಎಂದು ಎಸ್ ಪಿ ತಿಳಿಸಿದ್ದಾರೆ.