ಮೈಸೂರು: ವೀಸಾ ಅವಧಿ ಮುಗಿದರೂ 588 ವಿದೇಶಿಗರು ರಾಜ್ಯದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದು, ಇನ್ನೂ 531 ಮಂದಿ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳವಾರ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 7,953 ವಿದೇಶಿಗರು ಮಾನ್ಯ ವೀಸಾ ಹೊಂದಿದ್ದಾರೆ ಎಂದು ವಿವರಿಸಿದರು.
ವೀಸಾ ಅವಧಿ ಮೀರಿ ವಾಸಿಸುತ್ತಿರುವ 588 ವಿದೇಶಿಗರಲ್ಲಿ, ಹೆಚ್ಚಿನವರು ಬೆಂಗಳೂರು ನಗರದಲ್ಲೇ (542 ಮಂದಿ) ಪತ್ತೆಯಾಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 26, ಮಂಗಳೂರಿನಲ್ಲಿ 1, ಹುಬ್ಬಳ್ಳಿ-ಧಾರವಾಡದಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 11, ರಾಮನಗರದಲ್ಲಿ 4, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ 1 ಮಂದಿಯಿದ್ದಾರೆಂದು ಹೇಳಿದರು.
ಅದೇ ರೀತಿ, ಅಕ್ರಮವಾಗಿ ದೇಶ ಪ್ರವೇಶಿಸಿದ 531 ವಿದೇಶಿಗರಲ್ಲಿ 439 ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ 330 ಮಂದಿ ಬಾಂಗ್ಲಾದೇಶ ಮೂಲದವರಾಗಿದ್ದು, 42 ಮಂದಿ ನೈಜೀರಿಯಾ, 4 ಮಂದಿ ಇರಾನ್, 38 ಮಂದಿ ಶ್ರೀಲಂಕಾ ಮತ್ತು ಒಬ್ಬ ಪಾಕಿಸ್ತಾನ ಮೂಲದವರಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 402 ವಿದೇಶಿಗರನ್ನು ಗಡಿಪಾರು (deport) ಮಾಡಲಾಗಿದೆ ಎಂದು ಸಚಿವರು ಹೇಳಿದರು.
ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಗಿದರೂ ವಾಸಿಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳಿಗೆ ಪ್ರತಿ ತಿಂಗಳು FRRO ಮೂಲಕ ಅಕ್ರಮ ವಿದೇಶಿಗರ ವಿವರ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪೊಲೀಸ್ ಠಾಣೆ ಮಟ್ಟದಲ್ಲಿ ಗುಪ್ತಚರ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಿ, ಇಂತಹವರ ಚಲನವಲನದ ಮೇಲೆ ನಿಗಾ ಇಡಲಾಗಿದೆ.
ಅಕ್ರಮ ವಾಸ ಪತ್ತೆಯಾದಾಗ, ಸಂಬಂಧಿಸಿದವರ ವಿವರಗಳನ್ನು ಅವರ ದೇಶಗಳಿಗೆ ಮತ್ತು ವಿದೇಶಾಂಗ ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ಬಳಿಕ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, Foreigners Detention Centres (FDC)ಗಳಲ್ಲಿ ಇರಿಸಲಾಗುತ್ತದೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರನ್ನು ಗಡಿಪಾರು ಮಾಡಲಾಗುತ್ತದೆ. ಇದಲ್ಲದೆ, ಅಕ್ರಮವಾಗಿ ವಾಸಿಸಲು ಸಹಾಯ ಮಾಡುವ ಶಿಕ್ಷಣ ಸಂಸ್ಥೆಗಳು ಮತ್ತು ಇತರರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ತಿಳಿಸಿದ್ದು, ಈ ಮೂಲಕ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.