ಸುದ್ದಿ ಮುಖ್ಯಾಂಶಗಳು online desk
ರಾಜ್ಯ

News wrap 18-03-2026 | ಸರ್ಕಾರಕ್ಕೆ ಹೊರಟ್ಟಿ ಗಡುವು; ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ; 150 LPG ಸಿಲಿಂಡರ್ ವಶಕ್ಕೆ

3,052 ಕೋಟಿ ರೂ. ಮೌಲ್ಯದ ನೀರಾವರಿ ಯೋಜನೆಗಳಿಗೆ ರಾಜ್ಯದ ಪ್ರಸ್ತಾವನೆ; ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ- ಬೋಸರಾಜು

ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ 3,052 ಕೋಟಿ ರೂ. ಮೌಲ್ಯದ ನೀರಾವರಿ ಯೋಜನೆಗಳಿಗೆ ಕರ್ನಾಟಕ ಸರ್ಕಾರವು ಆರಂಭಿಕ ಅನುಮೋದನೆಯನ್ನು ಕೋರಿದೆ. ಇದಕ್ಕೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಪಿಎಂಕೆಎಸ್‌ವೈ) ಮತ್ತು ದುರಸ್ತಿ, ನವೀಕರಣ ಹಾಗೂ ಪುನಃಸ್ಥಾಪನೆ (ಆರ್‌ಆರ್‌ಆರ್) ಯೋಜನೆಗಳ ಅಡಿಯಲ್ಲಿ ಸಲ್ಲಿಸಲಾದ ಪ್ರಸ್ತಾವನೆಗಳು ಪ್ರಸ್ತುತ ಕೇಂದ್ರ ಜಲಸಂಪನ್ಮೂಲ ಸಚಿವಾಲಯದಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದು ಅವರು ದೆಹಲಿಯಲ್ಲಿ ನಡೆದ ಸಭೆಯ ನಂತರ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. "ರಾಜ್ಯ ಸರ್ಕಾರವು ಈಗಾಗಲೇ ಬಜೆಟ್‌ನಲ್ಲಿ ತನ್ನ ಶೇ. 40 ರಷ್ಟು ಹಣವನ್ನು ನೀಡುವ ಬದ್ಧತೆಯನ್ನು ಪ್ರದರ್ಶಿಸಿದೆ. ಆದರೆ ಉಳಿದ ಶೇ. 60 ರಷ್ಟು ಹಣವನ್ನು ಕೇಂದ್ರದಿಂದ ನಿರೀಕ್ಷಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕಲಬುರಗಿಗೆ ವಿಮಾನ ಸೇವೆಗಳನ್ನು ಪುನರಾರಂಭಿಸಲು ಅನುಕೂಲವಾಗುವಂತೆ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚೆ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿರುವುದಾಗಿ ಬೋಸರಾಜು ಹೇಳಿದ್ದಾರೆ.

ರೀಲ್ಸ್; ಬಸ್ ಪ್ರಯಾಣ ದರ ಅಣಕಿಸಲು ವೃದ್ಧನನ್ನು ಕೊರಿಯರ್ ಮಾಡಲು ಮುಂದಾದ ಕುಟುಂಬ

ರೀಲ್ಸ್ ಗಾಗಿ ಬೆಂಗಳೂರಿನ ಕುಟುಂಬವೊಂದು ವೃದ್ಧ ವ್ಯಕ್ತಿಯನ್ನು ಗೋಣಿಚೀಲದಲ್ಲಿ ತುಂಬಿ "ಕೊರಿಯರ್" ಮಾಡಲು ಯತ್ನಿಸಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ಸೇರಿ 5 ಮಂದಿಯ ಗುಂಪು, ಕೊರಿಯರ್ ಕಚೇರಿಗೆ ಹೋಗಿ, ಗೋಣಿ ಚೀಲದಲ್ಲಿ ತಂದಿದ್ದನ್ನು ಪಾರ್ಸೆಲ್ ಮಾಡಲು ಹೇಳಿದ್ದಾರೆ. ಒಳಗೆ ಏನಿದೆ ಎಂದು ಸಿಬ್ಬಂದಿ ಕೇಳಿದಾಗ, ಕುಟುಂಬದವರು ಮೌನವಾಗಿಯೇ ಇದ್ದರು. ಇದರಿಂದ ಅಚ್ಚರಿಗೊಂಡ ಸಿಬ್ಬಂದಿ ಪಾರ್ಸೆಲ್ ತೆರೆದು ನೋಡಿದಾಗ ಶಾಕ್ ಆಗಿದ್ದಾರೆ. ಮಹಿಳೆಯ ವೃದ್ಧ ತಂದೆ ಉಸಿರಾಟದ ತೊಂದರೆಯಾಗಿ ಒದ್ದಾಡುತ್ತಿರುವುದು ಕಂಡುಬಂದಿದೆ. ಸಿಬ್ಬಂದಿ ಕೂಡಲೇ ವೈಯಾಲಿಕಾವಲ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಪ್ರತಿಭಟನಾ ರೀಲ್‌ನ ಭಾಗವಾಗಿ ಕೃತ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪೊಲೀಸರ ಪ್ರಕಾರ, ಐದು ಸದಸ್ಯರ ಕುಟುಂಬವು ಖಾಸಗಿ ಕೊರಿಯರ್ ಕೇಂದ್ರವನ್ನು ಸಂಪರ್ಕಿಸಿ ಖಾಸಗಿ ಮತ್ತು ಸರ್ಕಾರಿ ಬಸ್‌ಗಳಲ್ಲಿ ಹೆಚ್ಚುತ್ತಿರುವ ಪ್ರಯಾಣ ದರಗಳ ಬಗ್ಗೆ ಸಾರ್ವಜನಿಕರಿಗೆ ಸಾಂಕೇತಿಕ ಸಂದೇಶವಾಗಿ ಆ ವ್ಯಕ್ತಿಯನ್ನು ಪಾರ್ಸೆಲ್ ಮಾಡಲು ಬಯಸುವುದಾಗಿ ಹೇಳಿಕೊಂಡಿದೆ.

ಅಡುಗೆ ಅನಿಲದ ಅಕ್ರಮ ಸಂಗ್ರಹಣೆ 150 ಸಿಲಿಂಡರ್ ವಶಕ್ಕೆ: ಕೆಹೆಚ್ ಮುನಿಯಪ್ಪ

ನಗರದಲ್ಲಿ ಅಡುಗೆ ಅನಿಲದ ಅಕ್ರಮ ಸಂಗ್ರಹಣೆಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ಪೊಲೀಸರು, ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 155 ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಆಹಾರ ನಿರೀಕ್ಷಕರ ದೂರಿನ ಆಧಾರದ ಮೇಲೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ದಾಳಿ ನಡೆಸಿ ಈ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೆ ಪಿ ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಲೇಔಟ್‌ನಲ್ಲಿರುವ ಗ್ಯಾಸ್ ಏಜೆನ್ಸಿಯ ಮಾಲೀಕರು ಬಿಪಿಸಿಎಲ್ (ಭಾರತ್ ಗ್ಯಾಸ್) ಸಿಲಿಂಡರ್‌ಗಳನ್ನು ಗೋಡೌನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾಕಿ ಇರುವ ಎಲ್ಲಾ ಉತ್ತರಗಳನ್ನು ಸಲ್ಲಿಸಲು ಸರ್ಕಾರಕ್ಕೆ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ

ಸದನದಲ್ಲಿ ಬಾಕಿ ಇರುವ ಎಲ್ಲಾ ಉತ್ತರಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ ಬುಧವಾರ ಗಡುವು ವಿಧಿಸಿದ್ದು, ನಿರ್ದೇಶನವನ್ನು ಪಾಲಿಸದಿದ್ದರೆ ಮರುದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಸಚಿವರ ಗೈರು ಕುರಿತು ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದ ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರಕ್ಕೆ ಉತ್ತರಗಳನ್ನು ನೀಡಲು ಗಡುವು ವಿಧಿಸಿದ್ದಾರೆ. ಮಾರ್ಚ್ 25 ರೊಳಗೆ ಬಾಕಿ ಇರುವ ಎಲ್ಲಾ ಉತ್ತರಗಳನ್ನು ಸಲ್ಲಿಸಬೇಕು ಎಂದು ಕಾಲಾವಕಾಶ ನೀಡಿದ್ದಾರೆ. ಈ ನಡುವೆ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಭರವಸೆ ನೀಡಿದ್ದಾರೆ. ಉತ್ತರ ನೀಡುವಲ್ಲಿನ ವಿಳಂಬವನ್ನು ಪರಿಹರಿಸಲು ಸರ್ಕಾರ ಈಗಾಗಲೇ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಪರಮೇಶ್ವರ ಹೇಳಿದರು. ಇದರಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವುದು ಮತ್ತು ನಿರಂತರ ನಿರ್ಲಕ್ಷ್ಯದ ಸಂದರ್ಭದಲ್ಲಿ ಅಮಾನತುಗೊಳಿಸುವ ಎಚ್ಚರಿಕೆ ಕ್ರಮಗಳು ಸೇರಿವೆ.

ವಿಧಾನಸಭೆಯಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆ ಮಂಡನೆ 

ಅಂತರ್ಜಾತಿ ವಿವಾಹಕ್ಕೆ ಅಡ್ಡಿಪಡಿಸುವುದು, ಮರ್ಯಾದೆಯ ಹೆಸರಿನಲ್ಲಿ ಹತ್ಯೆ ಪ್ರಕರಣಕ್ಕೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಮರ್ಯಾದಾ ಹತ್ಯೆ ನಿಷೇಧ ಮಸೂದೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಮಂಡಿಸಿದರು. ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯವನ್ನು ಒದಗಿಸಿ ಜಾತಿ ಆಧಾರಿತ ಅಪರಾಧಗಳನ್ನು ತಡೆಯಲು ಹಾಗೂ ನಿಷೇಧಿಸಲು ಈ ಮಸೂದೆ ಮಂಡನೆ ಮಾಡಲಾಗಿದೆ. ಅಂತರ್ಜಾತಿ ವಿವಾಹವನ್ನು ನೆರವೇರಿಸಲು ಇವ ನಮ್ಮವ ಇವ ನಮ್ಮವ ವೇದಿಕೆ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಜೋಡಿಗಳನ್ನು ಅಪಹರಣ ಮಾಡುವುದು, ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹಾಕುವುದು ಕಾನೂನು ಪ್ರಕಾರವಾಗಿ ಶಿಕ್ಷಾರ್ಹ ಅಪರಾಧವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

ಪಶ್ಚಿಮ ಬಂಗಾಳ ಚುನಾವಣೆ: 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ದೀದಿ; ಭುಗಿಲೆದ್ದ ಅಸಮಾಧಾನ

ಮಹಾ ದೋಖಾ: 1 ಲಕ್ಷ ರೂ ಬಿಲ್ ಮಾಡಿದ ಆಸ್ಪತ್ರೆ..; Itemized bill ಕೇಳಿದ ಮೇಲೆ 57 ಸಾವಿರಕ್ಕೆ ಇಳಿಕೆ!

'KD' ಸಿನಿಮಾದ ಅಶ್ಲೀಲ ಹಾಡು ಲೋಕಸಭೆಯಲ್ಲಿ ಪ್ರತಿಧ್ವನಿ; 'ಸರ್ಸೆ ನಿನ್ನ ಸೆರಗ ಸರ್ಸೆ' ಬ್ಯಾನ್!

SCROLL FOR NEXT