ಹುಮ್ನಾಬಾದ್: ಬೀದಿ ನಾಯಿಯೊಂದು ದಾಳಿ ನಡೆಸಿದ್ದರಿಂದ ನಾಲ್ಕು ತಿಂಗಳ ಹಸುಗೂಸು ಸಾವನ್ನಪಪಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಹುಮ್ನಾಬಾದ್ ತಾಲ್ಲೂಕಿನ ದಾಬಲಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗೆ ಮಗು ಮಲಗಿದ್ದ ವೇಳೆ ಪೋಷಕರು ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದಾಗ ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿದ್ದು, ತೊಟ್ಟಿಲಿನಲ್ಲಿ ಮಲಗಿದ್ದ ಶಿಶುವಿನ ಮೇಲೆ ದಾಳಿ ಮಾಡಿದೆ.
ಮಗುವಿನ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಮಗುವಿನ ಕೂಗು ಕೇಳಿ, ಪೋಷಕರು ಮನೆಗೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಶಿಶು ಬಿದ್ದಿದ್ದನ್ನು ನೋಡಿದ್ದಾರೆ. ಬಳಿಕ ಶಿಶುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಅಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ, ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.