ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಶನಿವಾರ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಗೊಬ್ಬರ ತುಂಬಿದ್ದ ಲಾರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಛಿದ್ರ ಛಿದ್ರವಾಗಿದೆ. ಭೀಕರ ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಮಂಡ್ಯ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕಾರಿನಲ್ಲಿದ್ದ ಕುಮಾರ್ ನರಸಿಂಹಸ್ವಾಮಿ ಹಾಗೂ ಅವರ ಪತ್ನಿ ಕೆಆರ್ ಗಾಯತ್ರಿ ಸೇರಿದಂತೆ ನಾಲ್ವರು ದುರ್ಮರಣ ಹೊಂದಿದ್ದು, ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆ ಪೊಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ ನಿವಾಸಿ ಕುಮಾರ್ ಅವರು ಕುಟುಂಬದೊಂದಿಗೆ ತುಮಕೂರು ಜಿಲ್ಲೆಯ ದೇವರಾಯನದುರ್ಗ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆದು ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಲಾರಿ ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ನಂತರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.