ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕೂರುವ ಮೊದಲೇ ಕರ್ನಾಟಕ ಸರ್ಕಾರ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು 11 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆ ಸಂಬಂಧ ಬಹುಕಾಲದಿಂದ ಬಾಕಿಯಾಗಿದ್ದ ಹಿಂಬಾಕಿ ಮೊತ್ತವನ್ನು ಕೊನೆಗೂ ಬಿಡುಗಡೆ ಮಾಡಲಾಗಿದೆ. ಈ ಕ್ರಮದಿಂದ ಸಂಸ್ಥೆಯ ಸಾವಿರಾರು ಸಿಬ್ಬಂದಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ದೊರೆತಿದೆ.
ರಾಜ್ಯ ಸರ್ಕಾರ 4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಹೀಗಾಗಿ ಇಂದು 11 ತಿಂಗಳ ಹಿಂಬಾಕಿ ಹಣವನ್ನ ಬಿಡುಗಡೆ ಮಾಡಿದೆ. ಉಳಿದ 3 ನಿಗಮಗಳ ನೌಕರರಿಗೂ ಹಿಂಬಾಕಿ ಹಣ ಪಾವತಿಯಾಗಿದೆ. ಇನ್ನೂ 15 ತಿಂಗಳ ಹಿಂಬಾಕಿಯನ್ನ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದೆ.
ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಮತ್ತು ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅನುಮೋದನೆಯ ನಂತರ ಹಿಂಬಾಕಿ ಮೊತ್ತ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ಹಂತ ಹಂತವಾಗಿ ನೌಕರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ನಿರೀಕ್ಷೆಯಿದೆ.
ಈ ನಿರ್ಧಾರವನ್ನು ಸಾರಿಗೆ ನೌಕರರ ಸಂಘಟನೆಗಳು ಸ್ವಾಗತಿಸಿದ್ದು, ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಅವರು ಹಲವು ತಿಂಗಳುಗಳಿಂದ ಆಗ್ರಹಿಸುತ್ತಿದ್ದರು. ಈ ಕ್ರಮ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ವಿಭಾಗದ ನೌಕರರಿಗೆ ಮಹತ್ವದ ಆರ್ಥಿಕ ನೆರವಾಗಲಿದೆ ಎಂದು ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ಇತ್ತೀಚಿನ ತಿಂಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಹಲವು ಸುತ್ತಿನ ಚರ್ಚೆಗಳು ಮತ್ತು ಪ್ರತಿಭಟನೆಗಳೂ ನಡೆದಿದ್ದವು. ಹಿಂಬಾಕಿ ವೇತನ ಬಿಡುಗಡೆ ನೌಕರರ ಮನೋಬಲ ಹೆಚ್ಚಿಸುವುದರ ಜೊತೆಗೆ ಸಾರಿಗೆ ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಟ್ವೀಟ್
ಇದೇ ವಿಚಾರವಾಗಿ ಸಚಿವ ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದು, 'ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ 11 ಬಾರಿ ಸಭೆಗಳನ್ನು ನಡೆಸಿದ್ದೇವೆ. ಸಾರಿಗೆ ನೌಕರರಿಗೆ 12.5 % ವೇತನ ಪರಿಷ್ಕರಣೆ ಮಾಡಿ ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ರೂ72.80 ಕೋಟಿ, ಪ್ರತಿ ವರ್ಷ ರೂ.873.64 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.
ಈಗಾಗಲೇ ತಮ್ಮ ಪಕ್ಷದ ಆಡಳಿತದ ಅವಧಿಯ 2023 ರ ಮಾರ್ಚ್ ನ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತ ರೂ. 1271.92 ಕೋಟಿಗಳಲ್ಲಿ ಮೊದಲ ಕಂತಿನ ಹಣ ರೂ. 450 ಕೋಟಿಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ' ಎಂದು ಹೇಳಿದ್ದಾರೆ.
ಮುಷ್ಕರಕ್ಕೆ ಕರೆ
ವೇತನ ಪರಿಷ್ಕರಣೆ ಒಪ್ಪಂದಕ್ಕೆ ಸಂಬಂಧಿಸಿದ ಹಿಂಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಬಿಎಂಟಿಸಿ ನೌಕರರು ಸರ್ಕಾರ ಮತ್ತು ಸಂಸ್ಥೆಯ ಆಡಳಿತ ಮಂಡಳಿಯನ್ನು ಹಲವು ಬಾರಿ ಒತ್ತಾಯಿಸಿದ್ದರು.
ಇನ್ನೊಂದೆಡೆ, ಸೇವಾ ನಿಯಮಗಳು ಮತ್ತು ನೌಕರರ ಕಲ್ಯಾಣಕ್ಕೆ ಸಂಬಂಧಿಸಿದ ಇತರೆ ಬಾಕಿ ಬೇಡಿಕೆಗಳನ್ನೂ ಶೀಘ್ರದಲ್ಲಿ ಈಡೇರಿಸಬೇಕೆಂದು ನೌಕರರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ. ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರದ ತಯಾರಿ ಜೊತೆಗೆ ಸರ್ಕಾರದ ಸಾಧನ ಸಮಾವೇಶಕ್ಕೂ ಹೋರಾಟದ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ.