ಬೀದರ್: ಬೀದರ್‌ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಾದ ಬ್ರಿಮ್ಸ್‌ನಲ್ಲಿ ಗುರುವಾರ ತಡರಾತ್ರಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಮೆಡಿಕೋ ಲೀಗಲ್ ಸರ್ಟಿಫಿಕೇಟ್ (MLC) ವಿಚಾರಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರತ ವೈದ್ಯ ಡಾ. ತುಕಾರಾಂ ಮಾಚಿಂದ್ರ ಅವರ ಮೇಲೆ ಗುರುವಾರ ಭೀಕರ ಹಲ್ಲೆ ನಡೆದಿತ್ತು.
ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಿಜಯ್ ಸಿಂಗ್ ತುಕಾರಾಂ ಎಂಬಾತ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿಜಯ್‌ನ ಸಂಬಂಧಿಕರು ಎಂಎಲ್‌ಸಿ ವಿಚಾರವಾಗಿ ವೈದ್ಯರೊಂದಿಗೆ ಗಲಾಟೆ ತೆಗೆದು ತೀವ್ರವಾಗಿ ಥಳಿಸಿದ್ದಾರೆ.
ಅಲ್ಲದೆ, ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು, ಏನಾದರೂ ಹೆಚ್ಚು ಕಡಿಮೆಯಾದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬ್ರಿಮ್ಸ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಗಾಯಾಳು ವೈದ್ಯ ಡಾ. ತುಕಾರಾಂ ನೀಡಿದ ದೂರಿನ ಮೇರೆಗೆ ಪೊಲೀಸರ 7 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಆರೋಪಿಗಳನ್ನು ಆದಿತ್ಯ ತಜಲಾಪುರ, ವಿನೋದ್ ಚಾಂಬೋಲ್, ಗೋವಿಂದ್ ಬೆನಕನಳ್ಳಿ, ಅನಿಲ್ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಜಲಾಪುರ, ಪವನ್ ಚಾಂಬೋಲ್ ಎಂದು ಗುರ್ತಿಸಲಾಗಿದೆ.
ಈ ನಡುವೆ ಘಟನೆಯನ್ನು ಖಂಡಿಸಿ ಬ್ರಿಮ್ಸ್ ಆಸ್ಪತ್ರೆಯ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಶುಕ್ರವಾರ ಆಸ್ಪತ್ರೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ವೈದ್ಯರ ರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಮಾತನಾಡಿ, ವೈದ್ಯರ ಮೇಲಿನ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬ್ರಿಮ್ಸ್‌ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಸದ ಸಾಗರ್ ಖಾಂಡ್ರೆ ಖಂಡನೆ
ಏತನ್ಮಧ್ಯೆ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ್ ಖಾಂಡ್ರೆ ಅವರು ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಮೇಲೆ ಸಣ್ಣ ವಿಷಯಕ್ಕಾಗಿ ಕಾನೂನನ್ನು ಕೈಗೆತ್ತಿಕೊಂಡು ಇಷ್ಟೊಂದು ಕ್ರೂರವಾಗಿ ಹಲ್ಲೆ ನಡೆಸಿರುವುದು ಅಮಾನವೀಯ ಮತ್ತು ಆಘಾತಕಾರಿ ಸಂಗತಿ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆಯು ಈಗಾಗಲೇ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ. ವೈದ್ಯರ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಯ ಒಳಗೆ ಭಯದ ವಾತಾವರಣ ಸೃಷ್ಟಿಸಿದ ಗುಂಪಿನ ಪ್ರತಿಯೊಬ್ಬ ಸದಸ್ಯನ ವಿರುದ್ಧವೂ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆಂದು ತಿಳಿಸಿದ್ದಾರೆ.