ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾಜ್ಯದ ಜನರು ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳುವ ಭಾವನಾತ್ಮಕ ಫೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.
ಕೃತಜ್ಞತೆಯ ಸೂಚಕವಾಗಿ ವೇದಿಕೆಯ ಮೇಲೆ ಕೈಗಳನ್ನು ಎತ್ತಿ ನಮಸ್ಕರಿಸುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಹಂಚಿಕೊಂಡಿದ್ದು, ಧನ್ಯವಾದಗಳು. ನಿಮ್ಮ ಪ್ರೀತಿ. ನಿಮ್ಮ ನಂಬಿಕೆ. ನನ್ನ ಶಾಶ್ವತ ಶಕ್ತಿ" ಎಂದು ಬರೆದುಕೊಂಡಿದ್ದಾರೆ.
ಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಂತಿದ್ದಕ್ಕಾಗಿ ಜನರಿಗೆ ಧನ್ಯವಾದ ಹೇಳಿದ್ದಾರೆ.- ನನ್ನನ್ನು ತಮ್ಮಲ್ಲಿ ಒಬ್ಬನೆಂದು ಪರಿಗಣಿಸಿದ, ನನ್ನನ್ನು ಆಶೀರ್ವದಿಸಿದ, ನನ್ನನ್ನು ಪ್ರೋತ್ಸಾಹಿಸಿದ, ನನ್ನನ್ನು ಸರಿಪಡಿಸಿದ, ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಮತ್ತು ಈ ದೀರ್ಘ ಪ್ರಯಾಣದುದ್ದಕ್ಕೂ ನನ್ನ ಕೈ ಹಿಡಿದ ಲಕ್ಷಾಂತರ ಪ್ರೀತಿಯ ಹೃದಯಗಳಿಗೆ ಮುಂದೆ ತಲೆಬಾಗುತ್ತೇನೆ. ನಾನು ಇಂದು ಏನಾಗಿದ್ದೇನೆಯೋ ಅದಕ್ಕೆ ನೀವೇ ಕಾರಣ ಎಂದಿದ್ದಾರೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ. ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ ಎಂದು ಅವರು ಹೇಳಿದ್ದಾರೆ.
ಸಂವಿಧಾನವೇ ನನ್ನ ಧರ್ಮ ಮತ್ತು ಜನರೇ ದೇವರು ಎಂದಿದ್ದು, ಮುಖ್ಯಮಂತ್ರಿ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಸಾರ್ವಜನಿಕ ಜೀವನ ಅಥವಾ ಜನರ ಮೇಲಿನ ಬದ್ಧತೆಗೆ ಅಲ್ಲ ಎಂದು ಹೇಳಿದ್ದಾರೆ. "ನನ್ನ ಕೊನೆಯ ಉಸಿರಿನವರೆಗೂ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ. ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುವ ಕೋಮು ಶಕ್ತಿಗಳ ವಿರುದ್ಧ ನಿಲ್ಲುತ್ತೇನೆ. ಈ ಪ್ರಯಾಣದ ಪ್ರತಿ ಹಂತದಲ್ಲೂ ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಒಡನಾಟಕ್ಕೆ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ.