ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದ ನಂತರ ಅವರಿಗೆ ಸಿದ್ದರಾಮಯ್ಯ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಇಂದು ಕರ್ನಾಟಕ ತಲಾವಾರು ಆದಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ‍್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.
ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು ಎಂದಿದ್ದಾರೆ.
ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು. ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡಾ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ ಎಂದು ಸಲಹೆ ನೀಡಿದ್ದಾರೆ.
ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಧೈರ್ಯ ನೀಡಿದ್ದಾರೆ.