ಬೆಂಗಳೂರು: 'ಅರ್ನಬ್' ಚಂಡಮಾರುತದಿಂದಾಗಿ ಹಾನಿಗೊಳಗಾದ ಆಂಧ್ರಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಮೂಲಸೌಕರ್ಯ ಮರುಸ್ಥಾಪನೆಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಹಾಯ ಹಸ್ತ ಚಾಚಿದೆ. ವಿದ್ಯುತ್ ಪೂರೈಕೆ ಮೂಲಸೌಕರ್ಯ ಮರುಸ್ಥಾಪಿಸಲು ಅಗತ್ಯವಿರುವ ಮಾನವಶಕ್ತಿ ಮತ್ತು ಉಪಕರಣಗಳನ್ನು ಒದಗಿಸುವಂತೆ ಆಂಧ್ರಪ್ರದೇಶ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ವಿನಂತಿಸಿತ್ತು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರವು ಇಂಧನ ಸಚಿವ ಕೆ ಜೆ ಜಾರ್ಜ್ ಅವರ ಮೇಲ್ವಿಚಾರಣೆಯಲ್ಲಿ ರಾಜ್ಯಗಳ ನಡುವಿನ ಸಹಕಾರ ಮತ್ತು ಒಗ್ಗಟ್ಟಿನ ದೃಷ್ಟಿಯಿಂದ ಆಂಧ್ರ ಪ್ರದೇಶಕ್ಕೆ ಸಹಾಯ ಮಾಡಲು ಮುಂದಾಗಿದೆ.
ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಸಂಕಷ್ಟದ ಈ ಸಮಯದಲ್ಲಿ ಕರ್ನಾಟಕದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ವಿದ್ಯುತ್ ಅತ್ಯಗತ್ಯ ಸೇವೆಯಾಗಿದ್ದು, ವಿಕೋಪಕ್ಕೆ ಸಿಲುಕಿದ ಜನರ ಕ್ಷೇಮಕ್ಕಾಗಿ ಅದನ್ನು ತಕ್ಷಣ ಮರುಸ್ಥಾಪಿಸುವುದು ತುರ್ತು ಅಗತ್ಯವಾಗಿದೆ. ಕಷ್ಟದ ಸಮಯದಲ್ಲಿ ಕರ್ನಾಟಕವು ಆಂಧ್ರಪ್ರದೇಶದ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಸಿಎಂ ಶಿವಕುಮಾರ್ ತಿಳಿಸಿದ್ದಾರೆ.
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣಾ ಮೂಲಸೌಕರ್ಯ ಮರುಸ್ಥಾಪನೆ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಶೀಘ್ರವಾಗಿ ವಿದ್ಯುತ್ ಪೂರೈಕೆಗೆ 500 ಕೌಶಲ್ಯಯುತ ಲೈನ್ಮನ್ಗಳು (Powermen), ಕ್ರೇನ್ ಮತ್ತು ಅರ್ಥ್ ಆಗರ್ಗಳನ್ನು (Earth Augers) ಹೊಂದಿರುವ 15 ಪಾಲ್ಫಿಂಗರ್ ಲಾರಿಗಳು ಹಾಗೂ 25 ಟ್ರ್ಯಾಕ್ಟರ್ ಆಧಾರಿತ ಡ್ರಿಲ್ಲಿಂಗ್ ಯಂತ್ರಗಳನ್ನು ರವಾನಿಸುತ್ತಿದೆ.
ಈ ತಂಡಗಳನ್ನು ತುರ್ತು ಸ್ಥಿತಿ ಆಧಾರದ ಮೇಲೆ ಸಜ್ಜುಗೊಳಿಸಲಾಗಿದ್ದು, ಸೋಮವಾರ ಮಧ್ಯಾಹ್ನವೇ ಆಂಧ್ರಪ್ರದೇಶಕ್ಕೆ ಪಯಣ ಬೆಳೆಸಿದ್ದು, ಮಧ್ಯರಾತ್ರಿಯ ತಲುಪಿವೆ. ಪರಿಣಾಮಕಾರಿ ನಿಯೋಜನೆ ಮತ್ತು ಸಮನ್ವಯಕ್ಕಾಗಿ, ಪ್ರತಿ ಎಸ್ಕಾಂ (ESCOM) ಆಂಧ್ರಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ಸಂಪರ್ಕ ಅಧಿಕಾರಿಯನ್ನು (SPOC) ನೇಮಿಸಲಾಗಿದೆ.
ಲೈನ್ಮನ್ಗಳನ್ನು ತಲಾ 10 ಸದಸ್ಯರ ತಂಡಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಒಬ್ಬ ಕಿರಿಯ ಎಂಜಿನಿಯರ್/ ಸಹಾಯಕ ಎಂಜಿನಿಯರ್ ನೇತೃತ್ವ ವಹಿಸುತ್ತಾರೆ. ನಿಯೋಜಿತ ತಂಡಗಳ ಒಟ್ಟಾರೆ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಪ್ರತಿ O&M ವೃತ್ತದಿಂದ ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ (EE) ಅವರನ್ನು ನಿಯೋಜಿಸಲಾಗಿದೆ. ಕಾಮಗಾರಿ ಸ್ಥಳಗಳಲ್ಲಿ ಉಪಕರಣಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಕ್ರೇನ್ ಮತ್ತು ಅರ್ಥ್ ಆಗರ್ಗಳನ್ನು ಹೊಂದಿರುವ ಪಾಲ್ಫಿಂಗರ್ ಲಾರಿಗಳು ಹಾಗೂ ಟ್ರ್ಯಾಕ್ಟರ್ ಆಧಾರಿತ ಡ್ರಿಲ್ಲಿಂಗ್ ಯಂತ್ರಗಳ ಜೊತೆಗೆ ಅವುಗಳ ಚಾಲಕರು/ಆಪರೇಟರ್ಗಳು ಸಹ ತೆರಳಲಿದ್ದಾರೆ. ನಿಯೋಜಿತ ಸಿಬ್ಬಂದಿಯ ಪ್ರಯಾಣ, ವಸತಿ ಮತ್ತು ಇತರ ಅಗತ್ಯ ವ್ಯವಸ್ಥೆಗಳ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಅಗತ್ಯ ತುರ್ತು ನಿಧಿ ನೆರವನ್ನು (contingency support) ಸಹ ಒದಗಿಸಲಾಗುತ್ತದೆ.
ಈ ಸಮಯೋಚಿತ ನೆರವು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ "ನೆರೆಹೊರೆಯವರಿಗೆ ಮೊದಲ ಆದ್ಯತೆ" (Neighbour first) ತತ್ವದಡಿ ಆಂಧ್ರಪ್ರದೇಶಕ್ಕೆ ಬೆಂಬಲ ನೀಡುವ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ವಿದ್ಯುತ್ ಸೇವೆಯನ್ನು ತ್ವರಿತವಾಗಿ ಮರುಸ್ಥಾಪಿಸುವಲ್ಲಿ ಕರ್ನಾಟಕದ ಬದ್ಧತೆಗೆ ಸಾಕ್ಷಿಯಾಗಿದೆ.