ಮಂಡ್ಯದ ಬಸರಾಳಿನಲ್ಲಿ ನಡೆದ ಕನ್ನಡ ಉತ್ಸವದಲ್ಲಿ ನಟ ದರ್ಶನ್ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಭಾಷಣ ಮಾಡುವುದು ನಿಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಹಾಗೂ ಸ್ಥಳೀಯ ಶಾಸಕ ರವಿಕುಮಾರ್ ಗಣಿಗ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.ರವಿಕುಮಾರ್ ಗಣಿಗ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಕೆಲವರು ನಟ ದರ್ಶನ್ ಪರವಾಗಿ ಜೈ ಡಿ ಬಾಸ್, ಡಿ ಬಾಸ್ ಎಂಬ ಘೋಷಣೆಗಳನ್ನು ಕೂಗಿದರು. ಇದಕ್ಕೆ ಗಣಿಗ, ಯಾವುದೋ ಅದು ಡಿ ಬಾಸ್, ಬಾಯಿ ಮುಚ್ಚಿಕೊಂಡು ಇರೋ, ನೀವು ಹೀಗೆ ಕಿರುಚಿದ್ದಕ್ಕೇ ದರ್ಶನ್ ಜೈಲಿಗೆ ಹೋಗಿದ್ದು ಎಂದು ಹೇಳಿದ್ದು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ದರ್ಶನ್ ಅಭಿಮಾನಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಶಾಸಕ ರವಿಕುಮಾರ್ ಗಣಿಗ ಹೇಳಿಕೆ ಮತ್ತೊಮ್ಮೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.