ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಮತ್ತಷ್ಚು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೈಗೆ ಬೇಡಿ, ಸರಪಳಿ ಧರಿಸಿ ಹಿಂಡಲಗಾ ಜೈಲಿನ ಮುಂದೆ 'ಜೈಲ್ ಭರೋ' ಚಳುವಳಿ ನಡೆಸುತ್ತಿದ್ದಾರೆ. ಪರಿಣಾಮ ಬೆಳಗಾವಿಯ ಕೇಂದ್ರ ಕಾರಾಗೃಹದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬ್ಬಿಗೆ ನ್ಯಾಯಯುತ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ರೈತರು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ, ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ರೈತ ಮುಖಂಡರಾದ ಪ್ರಕಾಶ ನಾಯಿಕ, ಕಿಶನ್ ನಂದಿ ನೇತೃತ್ವದಲ್ಲಿ ಕೈಗೆ ಬೇಡಿ, ಸರಪಳಿ ಹಾಕಿಕೊಂಡು ಧರಣಿ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಸೂಕ್ತ ಬೆಲೆ ಕೊಡಿ, ಇಲ್ಲವೇ ನಮ್ಮನ್ನು ಬಂಧಿಸಿ ಜೈಲಿಗೆ ಕಳಿಸಿ ಎಂದು ಪಟ್ಟುಹಿಡಿದರು. ರಸ್ತೆ ಮೇಲೆ ಬಾರುಕೋಲು ಬಾರಿಸಿ, ತಮ್ಮೊಳಗಿನ ಆಕ್ರೋಶ ಹೊರಹಾಕಿದರು.
ಈ ಮಧ್ಯೆ, ನೆರೆಯ ಗ್ರಾಮಗಳ ರೈತರು ಜೈಲಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಅವರನ್ನು ಜೈಲಿನ ಆವರಣದೊಳಗೆ ಪ್ರವೇಶಿಸದಂತೆ ಪೊಲೀಸರು ಹರಸಾಹಸ ಪಡಬೇಕಾಯಿತು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ಮತ್ತು ತಳ್ಳಾಟ-ನೂಕಾಟ ನಡೆಯಿತು.
ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯಿಂದ 4,500 ರೂ., ರಾಜ್ಯ ಸರ್ಕಾರದಿಂದ 1 ಸಾವಿರ ರೂ. ಪ್ರೋತ್ಸಾಹಧನ ಕೊಡುವವರೆಗೆ ನಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಶನ್ ನಂದಿ ಅವರು ಹೇಳಿದ್ದಾರೆ.