ಬೆಂಗಳೂರು: ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಬಗ್ಗೆ ಗೊಂದಲ ಮೂಡಿದೆ. ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪರಿಹಾರವನ್ನು ಪಾವತಿ ಮಾಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5,000 ನೆರವು ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ ಎಂದಿದ್ದಾರೆ.
SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.