ಬೆಂಗಳೂರು: ಅರ್ಜಿದಾರರೊಬ್ಬರಿಂದ 13 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ರಾಮನಗರ ತಾಲ್ಲೂಕಿನ ಉಪ ತಹಶೀಲ್ದಾರ್‌ನನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬೆಂಗಳೂರಿನ ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಉಪ ತಹಶೀಲ್ದಾರ್ ಸೋಮೇಶ್, ವಂಶವೃಕ್ಷ ಪ್ರಮಾಣಪತ್ರಕ್ಕೆ ಸಹಿ ಹಾಕಲು ಹೊಂಬೇಗೌಡನದೊಡ್ಡಿ ಗ್ರಾಮದ ರಾಕೇಶ್ ಎಂಬುವರಿಂದ ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರ ಪ್ರಕಾರ, ರಾಕೇಶ್ ಒಂದು ವಾರದ ಹಿಂದೆ ವಂಶ ವೃಕ್ಷ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಗ್ರಾಮ ಲೆಕ್ಕಾಧಿಕಾರಿಯ ಪರಿಶೀಲನೆಯ ಬಳಿಕ ಅಂತಿಮ ಸಹಿಗಾಗಿ ಅರ್ಜಿಯನ್ನು ಸೋಮೇಶ್ ಅವರಿಗೆ ಕಳುಹಿಸಲಾಗಿತ್ತು.
ಈ ವೇಳೆ ಪ್ರಮಾಣಪತ್ರಕ್ಕೆ ಸಹಿ ಹಾಕಲು ಉಪ ತಹಶೀಲ್ದಾರ್ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಹಲವು ಬಾರಿ ಮನವಿ ಮಾಡಿದರೂ ಲಂಚ ನೀಡದ ಹೊರತು ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದ್ದಾರೆ. ಬಳಿಕ ಮಾತುಕತೆಯ ನಂತರ ಲಂಚದ ಮೊತ್ತವನ್ನು 13 ಸಾವಿರ ರೂಪಾಯಿಗೆ ಇಳಿಸಲಾಗಿತ್ತು.
ಈ ನಡುವೆ ರಾಕೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು.
ಬುಧವಾರ ಬೆಳಗ್ಗೆ ಸುಮಾರು 11.50ರ ವೇಳೆಗೆ ರಾಕೇಶ್ ಉಪ ತಹಶೀಲ್ದಾರ್ ಕಚೇರಿಗೆ ತೆರಳಿ ಹಣ ನೀಡುತ್ತಿದ್ದಂತೆ, ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ನೇತೃತ್ವದ ತಂಡ ಸೋಮೇಶ್ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದೆ. ಈ ವೇಳೆ ಲಂಚದ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.