ವಿಜಯನಗರ ಶ್ರೀಕೃಷ್ಣದೇವರಾಯ ವಿವಿ 14ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. 
ರಾಜ್ಯ

ವಿಜಯನಗರ ಶ್ರೀಕೃಷ್ಣದೇವರಾಯ ವಿವಿ 14ನೇ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಪಡೆದಿದ್ದು, 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು.

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಸೋಮವಾರ ವಿವಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಿತು.

ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಮೂರ್ತಿ ಡಾ.ಕೃಷ್ಣ ಎಸ್. ದೀಕ್ಷಿತ್ ಅವರು ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದರು.

ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಪ್ರೊ.ವಿ.ಲೋಕೇಶ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಕಣ್ಣನ್ ಸೇರಿದಂತೆ ವಿವಿಯ ಎಲ್ಲಾ ಡೀನ್​ಗಳು, ಮುಖ್ಯಸ್ಥರು, ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಬಾರಿ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಪಡೆದರು. ವಿವಿಧ ವಿಭಾಗಗಳ ಒಟ್ಟು 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು. ಅದೇ ರೀತಿಯಾಗಿ ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 66 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 71 ವಿದ್ಯಾರ್ಥಿಗಳು ಸೇರಿ ಒಟ್ಟು 137 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದರು.

ವಿವಿಧ ಪದವಿಗಳಲ್ಲಿ ಚಿನ್ನದ ಪದಕ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ:

ಸ್ನಾತಕೋತ್ತರ ಪದವಿ ವಿಭಾಗ:

4 ಚಿನ್ನದ ಪದಕ ಪಡೆದವರು: ಸವಿತಾ (ವಾಣಿಜ್ಯಶಾಸ್ತ್ರ ವಿಭಾಗ) - ಶ್ರೀ ಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.

3 ಚಿನ್ನದ ಪದಕ ಪಡೆದವರು: ತಸ್ಮಿಯಾಬಾನು ಆರ್ (ಔದ್ಯೋಗಿಕ ರಸಾಯನಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.

2 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು:

ಉಜ್ಜನಿ ಈಶ್ವರ (ಭೌತಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.

ಸಮ್ರೀನ್ (ರಸಾಯನಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.

ಪದ್ಮಾವತಿ ಕೆ (ಸಮಾಜಕಾರ್ಯ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.

ಮಹಾಲಿಂಗಪ್ಪ ತಂಬ್ರಹಳ್ಳಿ (ಇತಿಹಾಸ ಮತ್ತು ಪುರಾತತ್ವ) - ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ.

ಸ್ನಾತಕ ಪದವಿ ವಿಭಾಗ:

ಪೂಜಾ (ಬಿ.ಕಾಮ್) - ಬಿಬಿಸಿ ಕಾಲೇಜು, ಬಳ್ಳಾರಿ.

ಅಜಯ್ (ಬಿ.ಎಸ್ಸಿ) - ಜಿ ವಿ ಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ.

ಬಸಮ್ಮ (ಬಿ.ಎ.) - ಜ್ಞಾನ ಭಾರತಿ ಡಿಗ್ರಿ ಕಾಲೇಜು, ಬಳ್ಳಾರಿ.

ಬಿ ಕಾವ್ಯ (ಬಿ.ಎಸ್.ಡಬ್ಲ್ಯೂ) - ಗಂಗೋತ್ರಿ ಪದವಿ ಕಾಲೇಜು, ಕೊಟ್ಟೂರು.

ಮೂವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ: ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರು ಸಾಧಕ ಮಹನೀಯರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

ಡಾ.ಹೆನ್ರಿ ಡಿಸೋಜಾ (ಶಿಕ್ಷಣ ಮತ್ತು ಸಮಾಜಸೇವೆ): ದಕ್ಷಿಣ ಕನ್ನಡದ ಕಿನ್ನಿಗೋಳಿಯಲ್ಲಿ 1949ರಲ್ಲಿ ಜನಿಸಿದ ಡಾ.ಹೆನ್ರಿ ಡಿಸೋಜಾ ಅವರು ಕ್ರೈಸ್ತ ಧರ್ಮಗುರುವಾಗಿ ಸೇವೆ ಆರಂಭಿಸಿ, ಯುವಕರ ಪ್ರೋತ್ಸಾಹಕ್ಕಾಗಿ ಶ್ರಮಿಸಿದ್ದಾರೆ. ಮಂಗಳೂರಿನ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. 2008ರಲ್ಲಿ ಬಳ್ಳಾರಿ ಧರ್ಮಪ್ರಾಂತ್ಯದ ನಾಲ್ಕನೇ ಬಿಷಪ್ ಆಗಿ ನೇಮಕಗೊಂಡು, ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ವಿಶೇಷ ಚೇತನ ಮಕ್ಕಳ ಶಾಲೆ, ಎಚ್‌ಐವಿ ಪೀಡಿತ ಮಕ್ಕಳ ಪುನರ್ವಸತಿ ಕೇಂದ್ರ, ಬಡ ವಿದ್ಯಾರ್ಥಿನಿಯರ ವಸತಿನಿಲಯ ಮತ್ತು ವೃದ್ಧಾಶ್ರಮವನ್ನು ಸ್ಥಾಪಿಸಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಉಚಿತ ಆರೋಗ್ಯ ಶಿಬಿರಗಳು, ದೇವದಾಸಿಯರು ಮತ್ತು ತೃತೀಯ ಲಿಂಗಿಗಳಿಗೆ ವಿಶೇಷ ಆರೋಗ್ಯ ಸೇವೆಯನ್ನು ಒದಗಿಸಿದ್ದಾರೆ. 2018ರಲ್ಲಿ ರೋಮ್‌ನಲ್ಲಿ ಭಾರತವನ್ನು ಎಲ್ ಪ್ರತಿನಿಧಿಸಿರುವ ಇವರು, 2000ರ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಹಾಗೂ 2017ರ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಚನ್ನಬಸವಣ್ಣ ಸಿ. (ಸಾಹಿತ್ಯ, ಪರಿಸರ ಹಾಗೂ ಸಮಾಜಸೇವೆ): ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ 1949ರಲ್ಲಿ ಜನಿಸಿದ ಇವರು 'ಲೋಹಿಯಾ ಚನ್ನಬಸವಣ್ಣ' ಎಂದೇ ಪ್ರಸಿದ್ಧರಾಗಿದ್ದಾರೆ. ಬಳ್ಳಾರಿಯಲ್ಲಿ ಲೋಹಿಯಾ ಪ್ರಕಾಶನ ಸ್ಥಾಪಿಸಿ, ಸುಮಾರು 100 ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು, ಇವರ ಪ್ರಕಾಶನದ ಹಲವು ಕೃತಿಗಳು ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿವೆ. 1980ರ ಗೋಕಾಕ ಚಳವಳಿ, ಜಾತಿ ವಿನಾಶ ಹೋರಾಟ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ಪರಿಸರ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2026ರ ಡಾ. ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಇವರು, ಕನ್ನಡಪರ ಹೋರಾಟ, ಸಮಾಜಸೇವೆ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

ಗೀತಾ ನಾಗಪಾಲ್ (ಶಿಕ್ಷಣ, ಕಲೆ ಹಾಗೂ ಸಮಾಜಸೇವೆ): 1959ರ ಆಗಸ್ಟ್ 27ರಂದು ಬೆಂಗಳೂರಿನಲ್ಲಿ ಜನಿಸಿದ ಗೀತಾ ನಾಗಪಾಲ್ ಅವರು, 1985ರಲ್ಲಿ ಸ್ಥಾಪನೆಯಾದ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಸಂಸ್ಥಾಪಕರು ಹಾಗೂ ಉಪಾಧ್ಯಕ್ಷರಾಗಿದ್ದಾರೆ. ನಾಲ್ಕು ದಶಕಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಬೆಳೆಸಿ, ಕಂಪ್ಯೂಟರ್ ವಿಜ್ಞಾನ, ಫಿಸಿಯೋಥೆರಪಿ, ಶುಶ್ರೂಷೆ ಮತ್ತು ನಿರ್ವಹಣಾ ಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಮಹಿಳಾ ಶಿಕ್ಷಣ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಚಲನಚಿತ್ರ ನಟಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಇವರು, ಸಮಗ್ರ ಕಲಿಕೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇವರಿಗೆ 'ನಾ ಕನ್ನಡಿಗ ಪ್ರಶಸ್ತಿ' (2025), 'ನಾರಿ ನಾರಾಯಣಿ ಪ್ರಶಸ್ತಿ' (2026) ಹಾಗೂ 'ಮಹಿಳಾ ಮಾಣಿಕ್ಯ ಪ್ರಶಸ್ತಿ' ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು, ಶರಣಾಗುವಂತೆ ಮನವಿ, Video ವೈರಲ್..!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ರಾಜ್‌ಕುಮಾರ್ ಮಳಗೆ ನಿವಾಸ ಮೇಲೆ ಲೋಕಾಯುಕ್ತ ದಾಳಿ; Video

Kulgam ದಾಳಿ ಎಫೆಕ್ಟ್: CRPF ಯೋಧರಿಗೆ Bulletproof jackets ಕಡ್ಡಾಯ; ಭದ್ರತಾ ಕ್ರಮ ಮತ್ತಷ್ಟು ಬಿಗಿ..!

ಹದಗೆಟ್ಟ ಗ್ರಾಮೀಣ ರಸ್ತೆಗಳಿಗೆ ಮುಕ್ತಿ; 10 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ, 15 ಸಾವಿರ ಕಿ.ಮೀ. ರಸ್ತೆಗಳಿಗೆ ಹೊಸ ರೂಪ..!

ಪತ್ನಿ ತವರು ಮನೆಗೆ ಹೋದ ಮಾತ್ರಕ್ಕೆ ಕ್ರೌರ್ಯವೆಂದು ಹೇಳಲಾಗದು, ವಿಚ್ಛೇದನಕ್ಕೆ ಆಧಾರವಾಗದು; ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು