ಲೇಖಕ ರವಿ ಹಂಜ್  
ರಾಜ್ಯ

'ಬಸವ ಮಂಟಪ' ಕೃತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಧರ್ಮ ವಿರೋಧಿಗಳು ನನ್ನ ವಾದ ಒಪ್ಪಲ್ಲ- ಲೇಖಕ ರವಿ ಹಂಜ್ ಸ್ಪಷ್ಟನೆ

ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ರವಿ ಹಂಜ್ ಹೇಳಿದ್ದಾರೆ.

ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ, ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣನವರ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್ ಬರೆದಿರುವ ಪುಸ್ತಕ ʻಬಸವ ಮಂಟಪʼ ವಿವಾದದ ಬಿರುಗಾಳಿ ಎಬ್ಬಿಸಿದೆ. ಪುಸ್ತಕದಲ್ಲಿ ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವುದು ವೀರಶೈವ ಲಿಂಗಾಯತ ಸಮುದಾಯದವರನ್ನ ಕೆರಳಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಶೋಧನೆಯ ಹೆಸರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಬಸವಾಭಿಮಾನಿಗಳಿಗೆ ನೋವುಂಟು ಮಾಡಿರುವ ರವಿ ಹಂಜ್ ಅವರ `ಬಸವ ಮಂಟಪ’ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಜತೆಗೆ, ಶಾಂತಿ ಕದಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಆಗ್ರಹಿಸಿದ್ದಾರೆ.

ಇದರ ಬೆನ್ನಲ್ಲೇ ಸಮಿತಿಯು ಹಂಜ್ ಮತ್ತು ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪೊಲೀಸರಿಗೆ ದೂರು ಕೊಟ್ಟಿದೆ. ಈ ಬೆಳವಣಿಗೆಗಳ ನಡುವೆ ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

ತಮ್ಮ ಪುಸ್ತಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನ ಕೊಟ್ಟಿರುವ ರವಿ ಹಂಜ್, ವೀರಶೈವ ಲಿಂಗಾಯತ ಒಂದೇ ಅನ್ನೋದಷ್ಟೇ ನನ್ನ ವಾದ. ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಸುದೀರ್ಘ ಹೇಳಿಕೆಯಲ್ಲಿ ಏನಿದೆ?

ಅಲ್ಲದೇ, ಪ್ರಕಟಣೆ ಮೂಲಕ ಸುದೀರ್ಘ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹಾಪುರುಷರಾದ ʻಶ್ರೀ ಬಸವಣ್ಣನವರನ್ನು ನಾನು ಕಳ್ಳ ಮತ್ತು ಕೊಲೆಗಾರ ಎಂದು ಕರೆದಿದ್ದೇನೆʼ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿವೆ. ಈ ಆರೋಪಗಳು ಸಂಪೂರ್ಣವಾಗಿ ದಾರಿ ತಪ್ಪಿಸುವಂತಹವುಗಳಾಗಿದ್ದು, ವಾಹಿನಿಯೊಂದಕ್ಕೆ ನಾನು ನೀಡಿದ ಸುಮಾರು 90 ನಿಮಿಷಗಳ ಸಂದರ್ಶನದ ಕೆಲವು ಹೇಳಿಕೆಗಳನ್ನ ಸಂದರ್ಭದಿಂದ ಹೊರಗಿಟ್ಟು ವ್ಯಾಖ್ಯಾನಿಸಿರುವುದರಿಂದ ಉದ್ಭವಿಸಿವೆ ಎಂದು ತಿಳಿಸಿದ್ದಾರೆ.

ಸಂದರ್ಶನದ ಸಂದರ್ಭದಲ್ಲಿ, ಬಸವಣ್ಣನವರು ಹಾಗೂ ಅವರ ಕಾಲಘಟ್ಟಕ್ಕೆ ಸಂಬಂಧಿಸಿದ ಕೆಲವು ವಚನಗಳು, ಪುರಾಣ ಕಥನಗಳು ಮತ್ತು ಐತಿಹಾಸಿಕ ದಾಖಲೆಗಳ ನಡುವೆ ಕಂಡುಬರುವ ಐತಿಹಾಸಿಕ ಹಾಗೂ ವ್ಯಾಖ್ಯಾನಾತ್ಮಕ ಭಿನ್ನತೆಗಳ ಕುರಿತು ನಾನು ಚರ್ಚಿಸುತ್ತಿದ್ದೆ. ಈ ವಿಭಿನ್ನ ಐತಿಹಾಸಿಕ ದೃಷ್ಟಿಕೋನಗಳನ್ನ ಪರಿಶೀಲಿಸುವುದು ಮತ್ತು ಅವುಗಳತ್ತ ಗಮನ ಸೆಳೆಯುವುದು ನನ್ನ ಉದ್ದೇಶವಾಗಿತ್ತೇ ಹೊರತು, ಬಸವಣ್ಣನವರನ್ನ ಅವಮಾನಿಸುವುದು, ಅವರ ಘನತೆಯನ್ನು ಕುಗ್ಗಿಸುವುದು ಅಥವಾ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವುದು ನನ್ನ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.

ವಿಶೇಷವಾಗಿ, ಬಿ.ಎಲ್ ರೈಸ್ ಅವರು ʻದಿ ಮೈಸೂರು ಗೆಜೆಟಿಯರ್ ಸಂಪುಟ 1ರ 332ನೇʼ ಪುಟದಲ್ಲಿ ದಾಖಲಿಸಿರುವ ಐತಿಹಾಸಿಕ ವಿವರವನ್ನ ನಾನು ಉಲ್ಲೇಖಿಸಿದ್ದೆ. ಈ ವಿವರವು ʻಬಿಜ್ಜಳಾಂಕ ಕಾವ್ಯʼ, ʻಬಿಜ್ಜಳರಾಯ ಚರಿತೆʼ ಸೇರಿದಂತೆ ಜೈನ ಸಾಹಿತ್ಯ ಮೂಲಗಳು ಹಾಗೂ ʻಬಸವ ಪುರಾಣʼದಂತಹ ಗ್ರಂಥಗಳಲ್ಲಿನ ನಿರೂಪಣೆಗಳನ್ನ ಆಧರಿಸಿದೆ. ಈ ಗ್ರಂಥಗಳ ಆಧಾರವಾಗಿ ಬಸವಣ್ಣನ ವಚನಗಳನ್ನ ತಾಳೆ ಹಾಕಿದಾಗ ಎಂತಹ ವೈರುಧ್ಯ ಸೃಷ್ಟಿಯಾಗುತ್ತದೆ. ಮೇಲಾಗಿ ವಚನಗಳು ಓದುಗರು ಅವರವರ ಭಾವಕ್ಕೆ ಅರ್ಥೈಸಿಕೊಳ್ಳುತ್ತಾರೆಯೇ ಹೊರತು ಅವುಗಳನ್ನುಹೀಗೆಯೇ ಅರ್ಥಮಾಡಿಕೊಳ್ಳಬೇಕು ಎಂದು ನಿರ್ದೇಶಿಸುವುದು ಸಲ್ಲದು. ಆ ಕಾರಣಕ್ಕಾಗಿ ಅವು ಧರ್ಮಗ್ರಂಥ ಎನ್ನಲು ಆಗದು ಎಂದು ಸಮರ್ಥಿಸಿಕೊಂಡಿದ್ದಾರೆ.

ಐತಿಹಾಸಿಕ ಆಕರ – ಮೈಸೂರು ಗೆಜೆಟಿಯರ್, ಸಂಪುಟ 1, ಪುಟ 332 ರಲ್ಲಿ ಏನಿದೆ?

ʻʻಬಿಜ್ಜಳನು ಜೈನ ಧರ್ಮದವನಾಗಿದ್ದನು. ಈ ಹಿಂದೆ ವಿವರಿಸಿದಂತೆ, ಚಾಲುಕ್ಯರ ಸೇನೆಯ ದಂಡನಾಯಕನಾಗಿದ್ದ ತನ್ನ ಅಧಿಕಾರವನ್ನು ಬಳಸಿಕೊಂಡು ಸಿಂಹಾಸನವನ್ನು ವಶಪಡಿಸಿಕೊಂಡನು. ಆದರೆ ಹಲವಾರು ವರ್ಷಗಳವರೆಗೆ ರಾಜಪದವಿಯ ಬಿರುದುಗಳನ್ನ ಧರಿಸಲಿಲ್ಲ. ತನ್ನ ಅಧಿಕಾರವನ್ನು ಕಸಿದುಕೊಂಡ 6ನೇ ವರ್ಷವಾದ ಕ್ರಿ.ಶ. 1162ರಲ್ಲಿ, ದಕ್ಷಿಣಕ್ಕೆ ತೆರಳಿದ್ದ ಚಾಲುಕ್ಯ ರಾಜಕುಮಾರನ ವಿರುದ್ಧ ದಂಡಯಾತ್ರೆ ಕೈಗೊಂಡು, ತನ್ನನ್ನು ಸಾರ್ವಭೌಮನೆಂದು ಘೋಷಿಸಿಕೊಂಡನು.ಅವನ ಆಳ್ವಿಕೆಯ ಅವಧಿಯಲ್ಲಿ, ಆರಾಧ್ಯನ ಮಗನಾದ ಬಸವನು ಕಲ್ಯಾಣಕ್ಕೆ ಬಂದು ನೆಲೆಸಿದನು. ಅಲ್ಲಿ ಅವನು ಮುಖ್ಯಮಂತ್ರಿಯ ಅಳಿಯನಾದನು. ಅವನಿಗೆ ಪದ್ಮಾವತಿ ಎಂಬ ಅತ್ಯಂತ ಸುಂದರಿಯಾದ ಸಹೋದರಿ ಇದ್ದಳು. ಬಿಜ್ಜಳನು ಅವಳನ್ನು ಕಂಡು ಮೋಹಗೊಂಡು ವಿವಾಹವಾದನು. ಹೀಗೆ ಕಾಲಕ್ರಮೇಣ ಬಸವನು ಮುಖ್ಯಮಂತ್ರಿಯೂ ಸೇನಾಧಿಪತಿಯೂ ಆದನು. ರಾಜನು ತನ್ನ ಸುಂದರ ಪತ್ನಿಯ ಮೋಹದಲ್ಲಿ ಮುಳುಗಿ, ಆಡಳಿತದ ಸಂಪೂರ್ಣ ಅಧಿಕಾರವನ್ನು ಬಸವನ ಕೈಗೆ ಬಿಟ್ಟುಕೊಟ್ಟನು. ಈ ಅವಕಾಶವನ್ನ ಬಳಸಿಕೊಂಡ ಬಸವನು ತನ್ನ ಪ್ರಭಾವವನ್ನ ಬಲಪಡಿಸಿಕೊಳ್ಳಲು ಆರಂಭಿಸಿದನು. ಹಳೆಯ ಅಧಿಕಾರಿಗಳನ್ನು ಸ್ಥಾನಚ್ಯುತಗೊಳಿಸಿ, ತನ್ನ ಅನುಯಾಯಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿದನು. ಅದೇ ಸಮಯದಲ್ಲಿ ರಾಜಕುಮಾರನ ವಿಶ್ವಾಸವನ್ನೂ ಗಳಿಸಲು ಪ್ರಯತ್ನಿಸಿದನು. ಈ ಕ್ರಮಗಳ ಮೂಲಕ ಹಾಗೂ ಹೊಸ ಧರ್ಮದ ಪ್ರಸಾರದ ಮೂಲಕ ಅವನ ಅಧಿಕಾರ ಮತ್ತು ಪ್ರಭಾವ ಬಹುಬೇಗ ಹೆಚ್ಚಾಯಿತು.

ಕೊನೆಗೆ ಬಿಜ್ಜಳನಿಗೆ ಬಸವನ ಪ್ರಭಾವದ ಬಗ್ಗೆ ಆತಂಕ ಉಂಟಾಗಿ, ಅವನನ್ನು ಬಂಧಿಸಲು ಪ್ರಯತ್ನಿಸಿದನು. ಆದರೆ ಬಸವನು ತಪ್ಪಿಸಿಕೊಂಡು, ತನ್ನನ್ನು ಹಿಂಬಾಲಿಸಲು ಕಳುಹಿಸಲಾದ ಸೈನಿಕರನ್ನು ಸೋಲಿಸಿದನು. ಅವನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅವನೊಂದಿಗೆ ಸೇರಿಕೊಂಡರು. ದಂಗೆಯನ್ನು ಹತ್ತಿಕ್ಕಲು ಸ್ವತಃ ಬಿಜ್ಜಳನೇ ಮುನ್ನಡೆದಾಗ, ಅವನು ಸೋಲನುಭವಿಸಿ, ಬಸವನಿಗೆ ಮತ್ತೆ ಅವನ ಹಿಂದಿನ ಅಧಿಕಾರ ಮತ್ತು ಸ್ಥಾನಮಾನಗಳನ್ನು ನೀಡಬೇಕಾಯಿತು. ಬಸವನು ತನ್ನ ಹಿಂದಿನ ಅಧಿಕಾರವನ್ನು ಮರಳಿ ಪಡೆದದ್ದಷ್ಟೇ ಅಲ್ಲದೆ, ರಾಜನ ಪ್ರಾಣ ತೆಗೆಯುವ ಸಂಚನ್ನೂ ರೂಪಿಸಿದನು. ತನ್ನ ಸೋದರಳಿಯನಾದ ಬಿಜ್ಜಳ ಮತ್ತು ಪದ್ಮಾವತಿಯ ಮಗನು ಅಪ್ರಾಪ್ತ ವಯಸ್ಸಿನವನಾಗಿದ್ದಾಗ, ತಾನು ರಾಜ್ಯದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಉದ್ದೇಶವೂ ಈ ಸಂಚಿನ ಹಿಂದೆ ಇದ್ದಿರಬಹುದು.

ರಾಜನ ಹತ್ಯೆ ನಡೆದ ವಿಧಾನದ ಕುರಿತು ವಿವಿಧ ದಾಖಲೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಜೈನರ ಬಿಜ್ಜಳಾಂಕ ಕಾವ್ಯದ ಪ್ರಕಾರ, ಕೊಲ್ಲಾಪುರದ ಶಿಲಾಹಾರ ದೊರೆಯ ವಿರುದ್ಧದ ಯಶಸ್ವಿ ದಂಡಯಾತ್ರೆಯಿಂದ ಹಿಂದಿರುಗುವಾಗ ಭೀಮಾ ನದಿಯ ದಡದಲ್ಲಿ ಬಿಜ್ಜಳನಿಗೆ ವಿಷಪ್ರಾಶನ ಮಾಡಲಾಯಿತು. ಆದರೆ ಲಿಂಗಾಯತರ ಬಸವ ಪುರಾಣದ ಪ್ರಕಾರ, ಬಸವನ ಮೂವರು ಅನುಯಾಯಿಗಳು ಬಿಜ್ಜಳನನ್ನು ಹತ್ಯೆ ಮಾಡಿದರು. ಬಿಜ್ಜಳನ ಮಗನಾದ ರಾಯಮುರಾರಿ ಸೋವಿಯು ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದನು. ಆಗ ಬಸವನು ಮಲಬಾರ್ ಕರಾವಳಿಯ ಉಳಿವೆ ಅಥವಾ ವೃಷಭಪುರಕ್ಕೆ ಪಲಾಯನ ಮಾಡಿದನು. ರಾಜನು ಅವನನ್ನು ಹಿಂಬಾಲಿಸಿ ಆ ಸ್ಥಳಕ್ಕೆ ಮುತ್ತಿಗೆ ಹಾಕಿದನು. ಪರಿಸ್ಥಿತಿ ತೀವ್ರಗೊಂಡಾಗ ಬಸವನು ಹತಾಶನಾಗಿ ಬಾವಿಗೆ ಹಾರಿ ಮುಳುಗಿ ಮೃತಪಟ್ಟನೆಂದು ಒಂದು ನಿರೂಪಣೆ ಹೇಳುತ್ತದೆ. ಆದರೆ ಲಿಂಗಾಯತರ ನಂಬಿಕೆಯ ಪ್ರಕಾರ, ಮಲಪ್ರಭಾ ಮತ್ತು ಕೃಷ್ಣಾ ನದಿಗಳ ಸಂಗಮದಲ್ಲಿರುವ ಸಂಗಮೇಶ್ವರದಲ್ಲಿ ಬಸವನು ಲಿಂಗೈಕ್ಯನಾದನು.

ಬಿ.ಎಲ್ ರೈಸ್ ಅವರಿಗೆ ಸಂಬಂಧಿಸಿದ ಈ ಐತಿಹಾಸಿಕ ನಿರೂಪಣೆಯು ʻಬಸವ ಪುರಾಣʼದಲ್ಲಿ ಕಂಡುಬರುವ ಸಾಂಪ್ರದಾಯಿಕ ನಿರೂಪಣೆಗಿಂತ ಗಣನೀಯವಾಗಿ ಭಿನ್ನವಾಗಿದೆ. ಐತಿಹಾಸಿಕ ಹಾಗೂ ಸಾಹಿತ್ಯಿಕ ಮೂಲಗಳಲ್ಲಿರುವ ಇಂತಹ ಭಿನ್ನತೆಗಳು, ವೈರುಧ್ಯಗಳು ಮತ್ತು ವಿವಿಧ ವ್ಯಾಖ್ಯಾನಗಳ ಕುರಿತಾಗಿಯೇ ನಾನು ಸಂದರ್ಶನದಲ್ಲಿ ಚರ್ಚಿಸಲು ಪ್ರಯತ್ನಿಸಿದ್ದೆ.ಒಬ್ಬ ಸಂಶೋಧಕನಾಗಿ ರೈಸ್ ಅವರ ದಾಖಲಾತಿ ಹಾಗೂ ಜೈನ ಪುರಾಣಗಳಲ್ಲಿರುವ ಉಲ್ಲೇಖಗಳನ್ನು ಪ್ರಸ್ತಾಪಿಸುವುದು ಅತ್ಯಗತ್ಯ. ಏಕೆಂದರೆ ನಿಜವಾದ ಸಂಶೋಧಕನು ತನ್ನ ಅಧ್ಯಯನದಲ್ಲಿ ತನಗೆ ಅನುಕೂಲಕರವಾದ ಅಂಶಗಳನ್ನು ಮಾತ್ರವಲ್ಲದೆ, ತನ್ನ ನಿಲುವಿಗೆ ವಿರುದ್ಧವಾಗಿರುವ ದಾಖಲೆಗಳು ಮತ್ತು ಆಕರಗಳನ್ನೂ ಪ್ರಾಮಾಣಿಕವಾಗಿ ಉಲ್ಲೇಖಿಸಬೇಕು. ಇದೇ ಸಂಶೋಧನಾ ಧರ್ಮ. ಈ ಕಾರಣಕ್ಕಾಗಿಯೇ ಆ ಐತಿಹಾಸಿಕ ಉಲ್ಲೇಖವನ್ನು ನಾನು ಪ್ರಸ್ತಾಪಿಸಿದ್ದೇನೆ.

ಆದರೆ, ಒಂದು ಐತಿಹಾಸಿಕ ಗ್ರಂಥದಲ್ಲಿರುವ ವಿಷಯವನ್ನು ಉಲ್ಲೇಖಿಸುವುದು, ಪರಿಶೀಲಿಸುವುದು ಅಥವಾ ಪ್ರಶ್ನಿಸುವುದು ಎಂದರೆ ಆ ಗ್ರಂಥದಲ್ಲಿರುವ ಪ್ರತಿಯೊಂದು ಹೇಳಿಕೆಯನ್ನೂ ಒಪ್ಪಿಕೊಂಡಂತೆ ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದೇ ರೀತಿ, ಐತಿಹಾಸಿಕ ದಾಖಲೆಗಳಲ್ಲಿನ ಪರಸ್ಪರ ವಿರುದ್ಧವಾದ ನಿರೂಪಣೆಗಳನ್ನು ಚರ್ಚಿಸುವುದರಿಂದ ಆ ಐತಿಹಾಸಿಕ ವ್ಯಕ್ತಿಯ ವಿರುದ್ಧ ವೈಯಕ್ತಿಕ ತೀರ್ಪು ನೀಡಿದಂತೆಯೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಶ್ರೀ ಬಸವಣ್ಣನವರನ್ನ ಕಳ್ಳ ಅಥವಾ ಕೊಲೆಗಾರ ಎಂದು ಕರೆದಿದ್ದೇನೆ ಎಂಬ ಆರೋಪವನ್ನು ಸಂಪೂರ್ಣವಾಗಿ ಮತ್ತು ಖಚಿತವಾಗಿ ತಳ್ಳಿಹಾಕುತ್ತೇನೆ. ಈ ಆರೋಪವು ನನ್ನ ಸಂದರ್ಶನದ ನೈಜ ಆಶಯ ಮತ್ತು ಸಂದರ್ಭವನ್ನು ತಪ್ಪಾಗಿ ಬಿಂಬಿಸುವುದಲ್ಲದೇ, ನಾನು ಹೇಳದ ಮಾತುಗಳನ್ನ ಮತ್ತು ಹೊಂದಿರದ ಉದ್ದೇಶಗಳನ್ನು ನನ್ನ ಮೇಲೆ ಆರೋಪಿಸುವ ಹತಾಶ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಸಂಬಂಧಿಸಿದ ಐತಿಹಾಸಿಕ ಚರ್ಚೆಗಳನ್ನು ಬೌದ್ಧಿಕ ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ಮೂಲ ಆಕರಗಳನ್ನ ಪರಿಶೀಲಿಸುವ ಮುಕ್ತ ಮನೋಭಾವದೊಂದಿಗೆ ನಡೆಸಬೇಕು ಎಂಬುದು ನನ್ನ ದೃಢವಾದ ನಿಲುವು. ನ್ಯಾಯಸಮ್ಮತವಾದ ಐತಿಹಾಸಿಕ ಚರ್ಚೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ತಪ್ಪಾಗಿ ಉಲ್ಲೇಖಿಸುವುದಾಗಲಿ, ವೈಯಕ್ತಿಕ ದಾಳಿಗೆ ಗುರಿಪಡಿಸುವುದಾಗಲಿ ಸರಿಯಲ್ಲ. ಆದ್ದರಿಂದ, ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿರುವವರು ಪ್ರತ್ಯೇಕ ಹೇಳಿಕೆಗಳನ್ನು ಅಥವಾ ಆಯ್ದ ವ್ಯಾಖ್ಯಾನಗಳನ್ನು ಆಧರಿಸುವ ಬದಲು, ದಯವಿಟ್ಟು ಸಂಪೂರ್ಣ ಸಂದರ್ಶನವನ್ನು ವೀಕ್ಷಿಸಿ, ಅದರ ನೈಜ ಸಂದರ್ಭ ಮತ್ತು ಆಶಯವನ್ನು ಅರ್ಥಮಾಡಿಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತವಾಗಿದ್ದು, ದಾರಿ ತಪ್ಪಿಸುವಂತಹವುಗಳಾಗಿವೆ. ಅಲ್ಲದೆ, ನನ್ನ ಚರ್ಚೆಯ ನೈಜ ವಿಷಯಕ್ಕೆ ಸಂಬಂಧವಿಲ್ಲದ ಬೇರೆ ಉದ್ದೇಶಗಳಿಂದ ಇಂತಹ ತಪ್ಪು ಚಿತ್ರಣ ನೀಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರೀತಿಯ ತಪ್ಪು ವ್ಯಾಖ್ಯಾನಗಳ ಹಿಂದಿನ ಕಾರಣಗಳು ಏನೆಂಬುದು ಊಹಿಸಲು ಕಷ್ಟವೇನಲ್ಲ. ನನ್ನ ಉದ್ದೇಶ ಸದಾ ಜ್ಞಾನಪೂರ್ಣ ಸಂವಾದಕ್ಕೆ ಪ್ರೋತ್ಸಾಹ ನೀಡುವುದು, ಐತಿಹಾಸಿಕ ಸಂಶೋಧನೆಯನ್ನ ಉತ್ತೇಜಿಸುವುದು ಮತ್ತು ಕರ್ನಾಟಕದ ಪರಂಪರೆಯ ಕುರಿತು ಆಳವಾದ ಅರಿವು ಮೂಡಿಸುವುದೇ ಹೊರತು, ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತರುವುದು ಅಥವಾ ಅವರನ್ನು ಅಗೌರವಿಸುವುದಲ್ಲ ಎಂದಿದ್ದಾರೆ.

ವೈಯಕ್ತಿಕವಾಗಿ, 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನ ಇಟ್ಟು, ವೀರಶೈವ ಲಿಂಗಾಯತ ಧರ್ಮವನ್ನ ಹೊಸ ಎತ್ತರಕ್ಕೆ ಕೊಂಡೊಯ್ದ ಬಸವಣ್ಣನವರ ಬಗ್ಗೆ ನನಗೆ ಗೌರವವಿದೆ. ಹಾಗೆಂದು ಚಾರಿತ್ರಿಕ ಸತ್ಯವನ್ನ ಅಲ್ಲಗಳೆಯದೇ, ವಿಮರ್ಶಿಸಲಾಗದೇ, ಸಂಶೋಧಿಸಲಾಗದೇ ಇರಬೇಕು ಎನ್ನುವದು ಸಂವಿಧಾನ ವಿರೋಧಿ ನಡೆ ಎನಿಸುತ್ತದೆ. ಅಖಂಡ ಹಿಂದೂ ವೀರಶೈವ ಲಿಂಗಾಯತ ಧರ್ಮೀಯರು ಸಮಾಜದಲ್ಲಿ ಕುತಂತ್ರ, ಕಲುಷಿತ ವಾತಾವರಣವನ್ನು ಸೃಷ್ಟಿಸುತ್ತಿರುವ ಧರ್ಮ ಭಂಜಕರ ಬಗ್ಗೆ ಎಚ್ಚರ ವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಸವಣ್ಣನವರ ಗೌರವಕ್ಕೆ ಧಕ್ಕೆ ಆರೋಪ: ಲೇಖಕ ರವಿ ಹಂಜ್ 'ಬಸವಮಂಟಪ' ಕೃತಿ ಮುಟ್ಟುಗೋಲಿಗೆ ಸಂಪುಟ ಒಪ್ಪಿಗೆ

ಇತಿಹಾಸ ಸೃಷ್ಟಿಸಿದ ಬುಮ್ರಾ: ಶ್ರೀನಾಥ್ ಹಿಂದಿಕ್ಕಿ ಭಾರತದ 10ನೇ ಯಶಸ್ವಿ ಟೆಸ್ಟ್ ಬೌಲರ್ ಸ್ಥಾನಕ್ಕೆ ಎಂಟ್ರಿ!

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video

'ಪರಮಾಣು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ, ಅದನ್ನು ಎಂದಿಗೂ ಮಾಡಬಾರದು': ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್, ಕ್ಸಿ ಜಿನ್ ಪಿಂಗ್ ಸಹಿ

ಕಾನೂನು ಎಲ್ಲರಿಗೂ ಒಂದೇ: ಕಾಡಿನೊಳಗೆ ಹುಲಿ-ಆನೆಯನ್ನು 'ಬೆನ್ನಟ್ಟಿದ' ತಮಿಳುನಾಡು ಸಚಿವನ ನಡೆಗೆ ಕರ್ನಾಟಕ ಆಕ್ಷೇಪ; Video