ಕನಸಿನಲ್ಲೂ ಬಸವಣ್ಣ ವಿರುದ್ದ ಮಾತಾಡಿಲ್ಲ; ಕೆಟ್ಟದಾಗಿ ಮಾತನಾಡಿದ್ದರೆ ಶರಣರ ಸಾಕ್ಷಿಯಾಗಿ ನಾನು ನಾಶವಾಗಲಿ: ಶಂಕರ್ ಬಿದರಿ
ನನ್ನ ಕನಸಿನಲ್ಲೂ ನಾನು ಬಸವಣ್ಣನ ವಿರುದ್ದ ಮಾತನಾಡಿಲ್ಲ. ನಾನು ಬಸವಣ್ಣರನ್ನ ಕೆಟ್ಟದಾಗಿ ಬಯಸಿದ್ದರೇ ನಾನು ಶರಣರ ಸಾಕ್ಷಿಯಾಗಿ ನಾಶವಾಗ್ಲಿ.
ಬೆಂಗಳೂರು: ಸಮಾಜ ಒಡೆದು ಸಮಾಜದ ನಾಯಕನಾಗಲು, ಸಿಎಂ ಆಗಲು ಮಾತನಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಮಹಾದೇವ ಬಿದರಿ ಅವರು ಸಚಿವ ಎಂ.ಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ ಪಾಟೀಲ್ ಅವರು ನನ್ನನ್ನ ಕೊಂಡಿಮಂಚಣ್ಣ ಅಂತಾರೆ. 72 ವರ್ಷದಿಂದ ನಾನು ಬಸವಣ್ಣನ ಸೇವೆ ಮಾಡುತ್ತಾ ಬಂದಿದ್ದೇನೆ. ನನ್ನ ಕನಸಿನಲ್ಲೂ ನಾನು ಬಸವಣ್ಣನ ವಿರುದ್ದ ಮಾತನಾಡಿಲ್ಲ. ನಾನು ಬಸವಣ್ಣರನ್ನ ಕೆಟ್ಟದಾಗಿ ಮಾತನಾಡಿದ್ದರೇ ನಾನು ಶರಣರ ಸಾಕ್ಷಿಯಾಗಿ ನಾಶವಾಗ್ಲಿ. ಸಮಾಜ ಒಡೆದು ಸಮಾಜದ ನಾಯಕನಾಗಲು, ಮುಖ್ಯಮಂತ್ರಿ ಆಗಲು ಮಾತನಾಡಿದ್ದಾರೆ. ಅವರು ರಾಜಕೀಯ ಲಾಭಕ್ಕೆ ಮಾತನಾಡಿದ್ರೇ ಅವರು ಏನಾಗಬೇಕು ಅಂತ ಸಮಾಜ ನಿರ್ಧಾರ ಮಾಡ್ಲಿ ಎಂದಿದ್ದಾರೆ.
ದೇವರು ಒಳ್ಳೆಯದನ್ನ ಮಾತನಾಡಲಿ ಎಂದು ಬಾಯಿಕೊಟ್ಟಿದ್ದಾನೆ. ಆದರೆ ಅವರು ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ನಾನು ಅವರ ಬಗ್ಗೆ ಮಾತನಾಡಿಲ್ಲ. ನನ್ನ ಬಗ್ಗೆ ಮಾತನಾಡಿದ್ದಿಂದ ನಾನು ಮಾತನಾಡಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಪುಸ್ತಕದ ಬೆಳವಣಿಗೆ ನಡೆದಾಗ ನಾನು ಬೆಂಗಳೂರಲ್ಲಿ ಇರಲಿಲ್ಲ. ನ.15ರಂದು ನಡೆದ ಬಸವ ಮಂಟಪ ಪುಸ್ತಕ ಬಿಡುಗಡೆಗೆ ನಾನು ಹೋಗಿದ್ದೆ. ಆಗ ವೀರಶೈವ ಬೇರೆ ಅಲ್ಲ, ಲಿಂಗಾಯತ ಬೇರೆ ಅಲ್ಲ. 2017ರಲ್ಲಿ ಲಿಂಗಾಯತ, ವೀರಶೈವ ಅಂತ ಒಡೆಯುವ ಕೆಲಸ ಆಯ್ತು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಎರಡೂ ಒಂದೇ ಎಂದು ಹೇಳಿದ್ರು ಈ ಬಗ್ಗೆಯೇ ಅಂದು ನಾವು ಮಾತಾಡಿದ್ದು ಎಂದು ಹೇಳಿದ್ದಾರೆ.