ಜನವರಿಯಲ್ಲಿ ಜಿಪಂ, ತಾಪಂ, ಚುನಾವಣೆ: ಮೀಸಲು ಅಂತಿಮ ಅಧಿಸೂಚನೆ ಪ್ರಕಟ- ಈಶ್ವರ್ ಖಂಡ್ರೆ
ರಾಜ್ಯದ 30 ಜಿಲ್ಲೆಗಳ 1101 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿ ಹಾಗೂ 234 ತಾಲೂಕು ಪಂಚಾಯತಿಗಳ 3580 ಸದಸ್ಯ ಸ್ಥಾನದ ಮೀಸಲು ನಿಗದಿ ಮಾಡಿ ರಾಜ್ಯ ಸರ್ಕಾರ ನಿನ್ನೆ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು: ರಾಜ್ಯ ಸರ್ಕಾರ ಜಿ.ಪಂ. ತಾಪಂ. ಕ್ಷೇತ್ರಗಳ ಮೀಸಲು ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ 30 ಜಿಲ್ಲೆಗಳ 1101 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿ ಹಾಗೂ 234 ತಾಲೂಕು ಪಂಚಾಯತಿಗಳ 3580 ಸದಸ್ಯ ಸ್ಥಾನದ ಮೀಸಲು ನಿಗದಿ ಮಾಡಿ ರಾಜ್ಯ ಸರ್ಕಾರ ನಿನ್ನೆ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದರು.
2022ರಲ್ಲಿಯೇ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಅವಧಿ ಪೂರ್ಣವಾಗಿತ್ತು. ಹಿಂದಿನ ಸರ್ಕಾರ ಚುನಾವಣೆ ನಡೆಸಿರಲಿಲ್ಲ. ನಮ್ಮ ಸರ್ಕಾರ ಕೆಲವು ಪಂಚಾಯತಿಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ ಹಾಗೂ ಕೆಲವು ಗ್ರಾಮ ಪಂಚಾಯತಿ ಕ್ಷೇತ್ರಗಳು ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ಪರಿಣಾಮವಾಗಿ ಕ್ಷೇತ್ರ ಪುನರ್ ವಿಂಗಡಣೆ ಅನಿವಾರ್ಯವಾಗಿತ್ತು. ಹೀಗಾಗಿ ವಿಳಂಬವಾಯಿತು ಎಂದು ತಿಳಿಸಿದರು.
ರಾಜ್ಯ ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದ್ದು, ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಿಸಿ ಚುನಾವಣೆ ನಡೆಸಲಿದೆ. ಬಹುತೇಕ ಜನವರಿಯಲ್ಲಿ ಚುನಾವಣೆಗಳು ನಡೆಯಲಿವೆ. ಕಾಂಗ್ರೆಸ್ ಪಕ್ಷ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಸಂಪೂರ್ಣ ಸಜ್ಜಾಗಿದೆ ಎಂದರು. https://erajyapatra.karnataka.gov.in/ ನಲ್ಲಿ ಎಲ್ಲ ಅಧಿಸೂಚನೆಗಳೂ ಲಭ್ಯವಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
6342 ಗ್ರಾಮ ಗ್ರಂಥಾಲಯಗಳಿಗೆ ಈಶ್ವರ ಖಂಡ್ರೆ ಚಾಲನೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 5888 ಅರಿವು ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 6342 ಗ್ರಾಮ ಗ್ರಂಥಾಲಯಗಳ ಕಾರ್ಯಾರಂಭಕ್ಕೆ ಸಚಿವ ಈಶ್ವರ ಬಿ ಖಂಡ್ರೆ ಇಂದು ವಿಧ್ಯುಕ್ತ ಚಾಲನೆ ನೀಡಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಗ್ರಾಮ ಗ್ರಂಥಾಲಯ ಉದ್ಘಾಟಿಸಿದ ಅವರು, 5,888 ಅರಿವು ಕೇಂದ್ರಗಳು ಸಮುದಾಯ ಗ್ರಂಥಾಲಯ ಮತ್ತು ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದ 6 ದಿನಗಳ ಕಾಲ ಕನಿಷ್ಠ 8 ಗಂಟೆಗಳಕಾಲ ಕಾರ್ಯ ನಿರ್ವಹಹಿಸುತ್ತಿವೆ. ಆದರೆ ಈ ಶಾಖಾ ಗ್ರಂಥಾಲಯಗಳು ವಾರಾಂತ್ಯದಲ್ಲಿ 2 ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಅರಿವು ಕೇಂದ್ರಗಳಲ್ಲಿ ಡಿಜಿಟಲ್ ಗ್ರಂಥಾಲಯ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು 'ಅರಿವು ಕೇಂದ್ರ'ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಜೊತೆಗೆ ವಿಕಲಚೇತನಸ್ನೇಹಿ ಕಲಿಕಾ ಸಾಧನಗಳನ್ನೂ ನೀಡಲಾಗಿದೆ. ದೃಷ್ಟಿ ಮತ್ತು ಶ್ರವಣ ಚೇತನ ಮಕ್ಕಳ ಕಲಿಕೆಗಾಗಿ 899 ಬೀಕನ್ ಲೈಬ್ರರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ರಾಜ್ಯದ ₹2,186 ಕೋಟಿ ಅನುದಾನ ಬಾಕಿ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಈಶ್ವರ್ ಖಂಡ್ರೆ ಸೂಚನೆ
ಉಚಿತ ಸದಸ್ಯತ್ವ- 51 ಲಕ್ಷ ಮಕ್ಕಳ ನೋಂದಣಿ: ಅರಿವು ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತ್ವ ಒದಗಿಸಲಾಗಿದ್ದು, ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತಗೆದುಕೊಂಡು ಹೋಗಿ ಓದುವ ಅವಕಾಶ ಕಲ್ಪಿಸಲಾಗಿದೆ. ಈ ಉಪಕ್ರಮದ ಪರಿಣಾಮವಾಗಿ ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.
ಅರಿವು ಕೇಂದ್ರದ ಗ್ರಂಥಪಾಲಕರಿಗೆ 19200ರೂ. ಸಂಭಾವನೆ ಖಾತ್ರಿ: ಅರಿವು ಕೇಂದ್ರಗಳಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುವವರಿಗೆ 19201 ರೂ. ಮಾಸಿಕ ಸಂಭಾವನೆಯನ್ನು ಖಾತ್ರಿಪಡಿಸಲಾಗಿದೆ ಎಂದೂ ಅವರು ತಿಳಿಸಿದರು. ರಾಜ್ಯದ ಎಲ್ಲ 6342 ಗ್ರಾಮ ಗ್ರಂಥಾಲಯಗಳು ವಿಧ್ಯುಕ್ತವಾಗಿ ಉದ್ಘಾಟನೆ ಆಗಿವೆ ಎಂದು ಈಶ್ವರ ಖಂಡ್ರೆ ಅಧಿಕೃತವಾಗಿ ಘೋಷಿಸಿದರು.
ಆನೆ-ಮಾನವ ಸಂಘರ್ಷಕ್ಕೆ ಆನೆಧಾಮ ಪರಿಹಾರ: ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಈಶ್ವರ್ ಖಂಡ್ರೆ, ರಾಜ್ಯದ ಕಾಡಿನಂಚಿನ ಗ್ರಾಮಗಳಲ್ಲಿನ ಆನೆ-ಮಾನವ ಸಂಘರ್ಷಕ್ಕೆ ಆನೆಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಪರಿಹಾರವಾಗಬಲ್ಲದು ಎಂದು ಹೇಳಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.