ಸಾಮಾಜಿಕ ನ್ಯಾಯ ಸಂವಿಧಾನದ ಆತ್ಮ: ಮೀಸಲಾತಿ ರದ್ದು ಮಾಡಿದರೆ ರಕ್ತಪಾತ; ಮಾಜಿ ಸಿಎಂ ಸಿದ್ದರಾಮಯ್ಯ
ಬಿಜೆಪಿಗೆ ಮೀಸಲಾತಿ ರದ್ದು ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಗೊತ್ತಿದೆ. ಬಿಜೆಪಿಯವರದ್ದು ದ್ವೇಷ ಹುಟ್ಟು ಹಾಕುವ ಕೆಲಸ. ಅವರದ್ದು ಸಮಾಜ ಛಿದ್ರ ಮಾಡುವ ಕೆಲಸ ಎಂದು ಕಿಡಿಕಾರಿದ್ದಾರೆ.
ಮೈಸೂರು: ಮೀಸಲಾತಿ ರದ್ದು ಮಾಡಿದ್ರೆ ರಕ್ತಪಾತ ಆಗುತ್ತೆ ಅನ್ನೋದು ಬಿಜೆಪಿಗೆ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಉಳಿಸಲು ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಬೇಕಿದೆ. ಸಂವಿಧಾನ ಉಳಿಸಲು ನಾವು ಎಂತಹ ಹೋರಾಟಕ್ಕೆ ಬೇಕಾದರೂ ತಯಾರಾಗಬೇಕಿದೆ ಎಂದರು.
ಬಿಜೆಪಿಗೆ ಮೀಸಲಾತಿ ರದ್ದು ಮಾಡಿದರೆ ರಕ್ತಪಾತ ಆಗುತ್ತದೆ ಎಂದು ಗೊತ್ತಿದೆ. ಬಿಜೆಪಿಯವರದ್ದು ದ್ವೇಷ ಹುಟ್ಟು ಹಾಕುವ ಕೆಲಸ. ಅವರದ್ದು ಸಮಾಜ ಛಿದ್ರ ಮಾಡುವ ಕೆಲಸ ಎಂದು ಕಿಡಿಕಾರಿದ್ದಾರೆ.
ಸಂವಿಧಾನದ ಆಶಯಗಳು ಈಗಲೂ ಈಡೇರಿಲ್ಲ. ಬಿಜೆಪಿಯವರು ಈಗ ಸಂವಿಧಾನದ ಬಗ್ಗೆ ಬಹಳ ಮಾತಾಡುತ್ತಿದ್ದಾರೆ. ಸಂವಿಧಾನವನ್ನು ಸಾವರ್ಕರ್, ಹೆಗ್ಗಡೆವಾರ್ ವಿರೋಧ ಮಾಡಿದ್ದರು. ಭಾರತೀಯತೆಯೇ ಈ ಸಂವಿಧಾನದಲ್ಲಿ ಇಲ್ಲ ಎಂದು ಸಾವರ್ಕರ್ ಟೀಕಿಸಿದ್ದರು. ಕೇಂದ್ರದ ಸಚಿವರೊಬ್ಬರು ಕೆಲ ವರ್ಷಗಳ ಹಿಂದೆ ಸಂವಿಧಾನ ಬದಲಾಯಿಸಲು ನಾವು ಬಂದಿದ್ದೇವೆ ಎಂದು ಹೇಳಿದ್ದರು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು.
ಬರೀ ರಾಜಕೀಯ ಸ್ವಾತಂತ್ರ್ಯದಿಂದ ಈ ದೇಶದಲ್ಲಿ ಬದಲಾವಣೆಯಾಗಲು ಸಾಧ್ಯವಿಲ್ಲ. ಅಸಮಾನತೆ ತೊಲಗಬೇಕು, ಆಗ ಮಾತ್ರ ದೇಶದಲ್ಲಿ ಬದಲಾವಣೆ ಆಗುತ್ತದೆ. ಅಸಮಾನತೆ ಹೊಗದೆ ಜಾತಿಯತೆ ಹೋಗಲ್ಲ. ಆರ್ಥಿಕ, ಸಾಮಾಜಿಕ ಸಮಾನತೆ ಬರಬೇಕು. ಅದು ಬಾರದೇ ಸ್ವಾತಂತ್ರ್ಯ ಪಡೆದಿದ್ದಕ್ಕೆ ಸಾರ್ಥಕತೆ ಬರಲ್ಲ. ಬಸವಣ್ಣನವರು ಜಾತಿ ವ್ಯವಸ್ಥೆ ಹೋಗಬೇಕು ಎಂದು ಪ್ರತಿಪಾದಿಸಿದರು. ಆದರೆ ಇಂದು ಕೂಡ ಜಾತಿ ವ್ಯವಸ್ಥೆ ಇದೆ ಎಂದು ಬೇಸರ ಹೊರಹಾಕಿದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ - ಇವುಗಳು ನಮ್ಮ ಸಂವಿಧಾನದ ಆತ್ಮ. ಈ ಉದಾತ್ತ ಮೌಲ್ಯಗಳ ಆಧಾರದಲ್ಲಿ ಭಾರತವನ್ನು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸಿರುವುದು ನಮ್ಮ ಸಂವಿಧಾನದ ಹಿರಿಮೆ.
ಶತಮಾನಗಳಿಂದ ಅಸಮಾನತೆ, ಅಸ್ಪೃಶ್ಯತೆ ಮತ್ತು ಶೋಷಣೆಗೆ ಒಳಗಾಗಿದ್ದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಕ್ಕು, ಘನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ದೂರದೃಷ್ಟಿಯ ಸಂವಿಧಾನವನ್ನು ರೂಪಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಮಹತ್ತರವಾದುದ್ದು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅವರ ಅಪಾರ ಪರಿಶ್ರಮ, ಜ್ಞಾನ ಮತ್ತು ಸಾಮಾಜಿಕ ಬದ್ಧತೆ ಭಾರತದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದೆ ಎಂದರು.
ಶೋಷಿತರು, ದಮನಿತರು ಮತ್ತು ಅವಕಾಶವಂಚಿತರ ಬದುಕಿನಲ್ಲಿ ಸ್ವಾಭಿಮಾನ ಹಾಗೂ ನ್ಯಾಯದ ಬೆಳಕು ಮೂಡಿಸಿದ ಬಾಬಾ ಸಾಹೇಬರಿಗೆ ಈ ದೇಶ ಸದಾ ಋಣಿಯಾಗಿರುತ್ತದೆ. ಸಂವಿಧಾನ ಕೇವಲ ಒಂದು ಕಾನೂನು ಗ್ರಂಥವಲ್ಲ, ಅದು ಶೋಷಿತರು ಮತ್ತು ಅವಕಾಶವಂಚಿತರ ಬದುಕಿನ ಭರವಸೆ, ಅವರ ಹಕ್ಕು ಮತ್ತು ಘನತೆಯ ರಕ್ಷಕ. ಸಂವಿಧಾನ ಉಳಿದರೆ ಮಾತ್ರ ಸಾಮಾಜಿಕ ನ್ಯಾಯದ ಆಶಯ ಉಳಿಯುತ್ತದೆ. ಆದ್ದರಿಂದ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು, ಅದರ ಆಶಯ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನಲ್ಲಿ ಸಾಕಾರಗೊಳಿಸಿ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ನೆಲೆಸಿರುವ ಸಮಸಮಾಜದ ನಿರ್ಮಾಣಕ್ಕೆ ಈ ದಿನ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ತಿಳಿಸಿದರು.