ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ data centre ಸ್ಥಾಪನೆಗೆ ಸರ್ಕಾರ ಚಿಂತನೆ; ಪ್ರಿಯಾಂಕ್ ಖರ್ಗೆ; Video
ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಸ್ತುತ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಪ್ರಕಾರ ಈ ಜಾಗದ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಮಂಗಳೂರು: ಬೆಂಗಳೂರಿನಾಚೆಗೂ ರಾಜ್ಯದ ಐಟಿ ವಲಯವನ್ನು ವಿಸ್ತರಿಸುವ ಉದ್ದೇಶದಿಂದ ಮಂಗಳೂರಿನ ಕರಾವಳಿಯಲ್ಲಿ ಭಾರತದ ಮೊದಲ ಸುಸ್ಥಿರ ದತ್ತಾಂಶ ಕೇಂದ್ರ (Sustainable Data Centre) ಸ್ಥಾಪಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಐಟಿ-ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳೂರು ಸಮೀಪ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ ಸಮೀಪ ಗುರುತಿಸಲಾಗಿರುವ 49 ಎಕರೆ ಜಾಗವನ್ನು ಸಚಿವರು ಪರಿಶೀಲಿಸಿದರು.
ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಸ್ತುತ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಪ್ರಕಾರ ಈ ಜಾಗದ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ದೇಶದ ಮೊದಲ ಸುಸ್ಥಿರ ದತ್ತಾಂಶ ಕೇಂದ್ರವನ್ನು ತಣ್ಣೀರುಬಾವಿಯಲ್ಲಿ ಸ್ಥಾಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅನುಮತಿಸಲಾದ ಚಟುವಟಿಕೆಗಳು ಹಾಗೂ ಅಗತ್ಯ ಮೂಲಸೌಕರ್ಯಗಳ ಕುರಿತು ಸಮಗ್ರ ಮಾಹಿತಿಯುಳ್ಳ ಶ್ವೇತಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗುವುದು. ಇದರಿಂದ ಖಾಸಗಿ ವಲಯದ ಭಾಗವಹಿಸುವಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿರುವ 'ಕರ್ನಾಟಕ ಸುಸ್ಥಿರ ದತ್ತಾಂಶ ಕೇಂದ್ರ ನೀತಿ 2026-31'ಗೆ ಈ ಉಪಕ್ರಮ ಪೂರಕವಾಗಿದೆ.
ಹಿಂದಿನ ನೀತಿಯನ್ನು ರದ್ದುಗೊಳಿಸಿ ಸುಸ್ಥಿರ ಚೌಕಟ್ಟನ್ನು ಪರಿಚಯಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಮೂಲಸೌಕರ್ಯಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ತಡೆಯಲು ಕನಿಷ್ಠ ನೀರು ಮತ್ತು ಇಂಧನ ಬಳಕೆಯನ್ನು ಕಡ್ಡಾಯಗೊಳಿಸುವ ಈ ನೀತಿ ಭಾರತದಲ್ಲೇ ಮೊದಲನೆಯದು ಎಂದು ಅವರು ಪ್ರತಿಪಾದಿಸಿದರು.
ಬೆಂಗಳೂರಿನಾಚೆಗೂ ಐಟಿ ವಲಯವನ್ನು ವಿಸ್ತರಿಸುವ ಯೋಜನೆಗಳ ಕುರಿತು ಮಾತನಾಡಿದ ಖರ್ಗೆ, ಮಂಗಳೂರು, ಮಣಿಪಾಲ ಮತ್ತು ಉಡುಪಿಯನ್ನು ಒಳಗೊಂಡ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.
ಪ್ರಸ್ತುತ ಕರಾವಳಿ ಭಾಗದಿಂದ 5,000 ಕೋಟಿ ರೂ. ಮೌಲ್ಯದ ಐಟಿ ರಫ್ತು ನಡೆಯುತ್ತಿದೆ. ಈ ಪ್ರದೇಶದಲ್ಲಿ ನ್ಯಾನೋ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳನ್ನು (GCCs) ಸ್ಥಾಪಿಸಲು ಕಂಪನಿಗಳು ಆಸಕ್ತಿ ತೋರುತ್ತಿವೆ ಎಂದು ತಿಳಿಸಿದರು.