ನಮ್ಮೆಲ್ಲರಿಗೂ ಇಚ್ಚಾಶಕ್ತಿ ಕೊರತೆ: ಊಟ ಮಾಡಿ 18 ಗಂಟೆ ನಿದ್ದೆ ಮಾಡಿದ್ರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತಾ?
ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಂದಾಗಿ ಹೋರಾಟ ಮಾಡಬೇಕು. ಸಂಘಟಿತ ಪ್ರಯತ್ನ ಮಾಡಬೇಕು. ಉತ್ತರ ಕರ್ನಾಟಕದ ರಾಜಕಾರಣಿಗಳಿಂದಲೇ ಈ ಭಾಗ ಹಿಂದುಳಿದಿದೆ ಎಂದರು.
ಕೊಪ್ಪಳ: ಊಟ ಮಾಡಿ 18 ತಾಸು ನಿದ್ದೆ ಮಾಡಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಅನೇಕರು ಅವರ ಅಭಿಪ್ರಾಯ ಹೇಳುತ್ತಿದ್ದು ಇದು ವೈಯಕ್ತಿಕ. ಪ್ರತ್ಯೇಕ ರಾಜ್ಯದ ಕೂಗು ಸಾರ್ವಜನಿಕರ ಭಾವನೆ ಅಲ್ಲ ಎಂದರು.
ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಪ್ರತ್ಯೇಕ ರಾಜ್ಯ ಕೇಳುತ್ತಿರುವವರ ವಾದ. ಈ ಭಾಗದ ಅಭಿವೃದ್ಧಿಗೆ ನಮ್ಮೆಲ್ಲರ ಇಚ್ಚಾಶಕ್ತಿ ಹಾಗೂ ಹೊಂದಾಣಿಕೆ ಕೊರತೆ ಕಾರಣವಾಗಿದೆ ಎಂದರು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಒಂದಾಗಿ ಹೋರಾಟ ಮಾಡಬೇಕು. ಸಂಘಟಿತ ಪ್ರಯತ್ನ ಮಾಡಬೇಕು. ಉತ್ತರ ಕರ್ನಾಟಕದ ರಾಜಕಾರಣಿಗಳಿಂದಲೇ ಈ ಭಾಗ ಹಿಂದುಳಿದಿದೆ ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಒಳ್ಳೆಯದು ಎಂದು ಒಮ್ಮೊಮ್ಮೆ ನಮಗೂ ಅನಿಸುತ್ತದೆ. ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯಾಗುವುದು ನಿಶ್ಚಿತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.