ಫ್ರೀಡಂ ಪಾರ್ಕ್‌ಗೆ ಮಾತ್ರ ಪ್ರತಿಭಟನೆ ಸೀಮಿತ: ಆದೇಶ ಹಿಂಪಡೆಯಲು ಪ್ರತಿಭಟನೆ, ನೂರಾರು ಪ್ರತಿಭಟನಾಕಾರರ ಬಂಧನ, ಬಿಡುಗಡೆ
ಈ ಆದೇಶವು ಬೆಂಗಳೂರು ನಗರದ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸುತ್ತದೆ ಮತ್ತು ಕೇವಲ 'ಫ್ರೀಡಂ ಪಾರ್ಕ್'ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ನೀಡುತ್ತದೆ.
ಬೆಂಗಳೂರು: ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ ಗೆ ಮಾತ್ರ ಸೀಮಿತಗೊಳಿಸಿರುವ 2021ರ ಪೊಲೀಸ್ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು. ನಗರದ ಮೌರ್ಯ ವೃತ್ತದಿಂದ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಮುಂದಾದ ಸುಮಾರು 200 ಜನರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಕಾಯಿದೆ'ಯ ಸೆಕ್ಷನ್ 31(1)(o) ಅಡಿಯಲ್ಲಿ ಹೊರಡಿಸಲಾದ ಮತ್ತು 2022ರ ಜನವರಿಯಿಂದ ಜಾರಿಗೆ ಬಂದಿರುವ, 'ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021' (ಇದನ್ನು ಸಾಮಾನ್ಯವಾಗಿ 'ಪರವಾನಗಿ ಆದೇಶ' ಎಂದು ಕರೆಯಲಾಗುತ್ತದೆ) ಅನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಇವರು ಪ್ರತಿಭಟನೆ ನಡೆಸಿದರು.
ಈ ಆದೇಶವು ಬೆಂಗಳೂರು ನಗರದ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸುತ್ತದೆ ಮತ್ತು ಕೇವಲ 'ಫ್ರೀಡಂ ಪಾರ್ಕ್'ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ನೀಡುತ್ತದೆ.
ಪ್ರತಿಭಟಿಸುವ ಹಕ್ಕು ಯಾವುದೇ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಕೊಳೆಗೇರಿ ನಿವಾಸಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಗುಂಪುಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಹಕ್ಕುಗಳ ಗುಂಪುಗಳು, ಪರಿಸರ ಪರ ಸಂಘಟನೆಗಳು ಹಾಗೂ ಸಂವಿಧಾನವನ್ನು ಎತ್ತಿಹಿಡಿಯಲು ಶ್ರಮಿಸುತ್ತಿರುವ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಭಾಗವಹಿಸಿದ್ದರು.
ಸೆಂಟ್ರಲ್ ಆರ್ಮ್ಡ್ ರಿಸರ್ವ್ (CAR) ಮೈದಾನದಲ್ಲಿ ವಶದಲ್ಲಿರುವಾಗಲೂ, ಈ ಒಕ್ಕೂಟವು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿತು. ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಈ ಆದೇಶದ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಕರೆ ನೀಡಿದರು.
'ಸ್ಲಮ್ ಜನರ ಸಂಘಟನೆ'ಯ ಐಸಾಕ್ ಅಮೃತ್‌ರಾಜ್ ಮಾತನಾಡಿ, ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೋರ್ ವೆಲ್ ದುರಸ್ತಿ ಹಾಗೂ ಯಾವುದೇ ಮುನ್ಸೂಚನೆ ನೀಡದೆ ನಡೆಯುವ ಅಕ್ರಮ ತೆರವು ಕಾರ್ಯಾಚರಣೆಗಳ ವಿರುದ್ಧ ಹೋರಾಡಲು ನಿವಾಸಿಗಳು ಸಮಸ್ಯೆ ಎದುರಾದ ಸ್ಥಳದಲ್ಲಿಯೇ ಪ್ರತಿಭಟಿಸಬೇಕಾಗುತ್ತದೆ. ಇಂತಹ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್ ಗೆ ಸೀಮಿತಗೊಳಿಸುವುದು ಅರ್ಥ ಹೀನ ಎಂದು ಹೇಳಿದರು.
'ಫ್ರೈಡೇಸ್ ಫಾರ್ ಫ್ಯೂಚರ್' (Fridays for Future) ಮತ್ತು 'ಬೆಂಗಳೂರು ಎನ್ವಿರಾನ್‌ಮೆಂಟ್ ಫೋರಮ್' (Bangalore Environment Forum) ಹೆಬ್ಬಾಳ ಸುರಂಗ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು 2,000 ಕೋಟಿ ರೂಪಾಯಿ ವೆಚ್ಚದ ಈ ಸುರಂಗವನ್ನು ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲೇ ನಾಗರಿಕರು ಪ್ರತಿಭಟಿಸುವುದು ಅಗತ್ಯವಾಗಿದೆ ಎಂದು ತಿಳಿಸಿದವು.
ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಸೀಮಿತ: ಸಂಚಾರ ದಟ್ಟಣೆ, ಪ್ರತಿಭಟನಾಕಾರರ ಕೂಗಿನಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿ!
ಕೇವಲ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕೆಂದು ನಿರ್ಬಂಧಿಸುವ ಇಂತಹ ಪ್ರಜಾಪ್ರಭುತ್ವ ವಿರೋಧಿ ಆದೇಶಕ್ಕಾಗಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ 'ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್' (AICCTU), ಪ್ರತಿಭಟಿಸುವ ಹಕ್ಕು ಇಲ್ಲದಿದ್ದರೆ, ಗುತ್ತಿಗೆ ಪದ್ಧತಿಯ (contractualisation) ವಿರುದ್ಧದ ಹೋರಾಟವು ಎಂದಿಗೂ ಸರ್ಕಾರದ ಗಮನಕ್ಕೆ ಬರುತ್ತಿರಲಿಲ್ಲ ಎಂದು ಹೇಳಿತು.
ಕಾರ್ಮಿಕರನ್ನು ಖಾಯಂಗೊಳಿಸುವುದು ಮತ್ತು ನ್ಯಾಯಯುತ ವೇತನದ ಖಾತರಿಯನ್ನು ಪಡೆಯುವುದು ನಿರಂತರ ಹೋರಾಟವಾಗಿದ್ದು, ಇದು ಬೀದಿಗಳಲ್ಲಿ ನಡೆಸುವ ಪ್ರತಿಭಟನೆಗಳ ಮೂಲಕವೇ ಬಗೆಹರಿಯಬಲ್ಲದು. ಭಾರತದ ಬಹುತೇಕ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳನ್ನು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿರುವ ಹಿನ್ನೆಲೆಯಲ್ಲಿ, ಪ್ರತಿಭಟಿಸುವ ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ರಕ್ಷಿಸಿಕೊಳ್ಳಲು ಹೋರಾಡುವಂತೆ ಈ ಅಭಿಯಾನವು ದೇಶದಾದ್ಯಂತ ಜನರಿಗೆ ಕರೆ ನೀಡಿತು.
ಅಸಹಕಾರ ಚಳುವಳಿಯು ಮುಂದುವರಿಯಲಿದೆ ಎಂದು ಘೋಷಿಸುವ ಮೂಲಕ ಈ ಅಭಿಯಾನವು ಮುಕ್ತಾಯಗೊಂಡಿತು. ನಗರದಲ್ಲಿ ಎಲ್ಲಿ ಅನ್ಯಾಯ ನಡೆಯುತ್ತದೆಯೋ, ಅಲ್ಲೆಲ್ಲಾ ನಾವು ಪ್ರತಿಭಟಿಸುತ್ತೇವೆ ಎಂದು ತಿಳಿಸಲಾಯಿತು.