ರಾಮನಗರ: ಮಧ್ಯರಾತ್ರಿ ಗಂಟೆ ಸುಮಾರಿಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ ಖಾದರ್ (U.T Khader) ಭೇಟಿ ನೀಡಿದ್ದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಅವರು ಬಂದಿದ್ದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆಯನ್ನು ಪರಿಶೀಲನೆ ನಡೆಸಿದರು. ಜನರಲ್ ವಾರ್ಡ್, ಐಸಿಯು, ಶೌಚಾಲಯವನ್ನು ಪರಿಶೀಲಿಸಿದರು. ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.
ಇದೇ ವೇಳೆ ಔಷಧಿಯನ್ನು ಹೊರಗಡೆ ಮೆಡಿಕಲ್‌ಗಳಿಗೆ ಬರೆದುಕೊಡುವ ವಿಚಾರಕ್ಕೆ ಸಚಿವರು ಗರಂ ಆದರು. ಇಷ್ಟೆಲ್ಲಾ ಸೌಲಭ್ಯ ಇದ್ದರೂ, ಹೊರಗಡೆ ಯಾಕೆ ಬರೆದು ಕೊಡ್ತೀರಾ ಎಂದು ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಆರೋಗ್ಯ ಸಚಿವ ಯುಟಿ ಖಾದರ್ ತಮ್ಮ ವಿಭಿನ್ನ ಶೈಲಿಯ ಕೆಲಸ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಅವರು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ತಡ ರಾತ್ರಿ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳ ಕುಂದು ಕೊರತೆಯ ಬಗ್ಗೆ ಆಲಿಸಿದ್ದಾರೆ.
ಆರೋಗ್ಯ ಸಚಿವರ ದಿಢೀರ್ ಭೇಟಿಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಸಿಬ್ಬಂದಿ ಅಸಹಕಾರದ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಖಾದರ್, ಮುಂದಿನ ದಿನಗಳಲ್ಲಿ ಇಂತಹ ನಡೆಗಳು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.