ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮದುವೆ ಬಳಿಕ ಅದ್ದೂರಿಯಾಗಿ ಹಮ್ಮಿಕೊಳ್ಳುವ ‘ಬೀಗರ ಊಟ’(ಬಾಡೂಟ) ಕೇವಲ ಸಂಪ್ರದಾಯವಾಗಿ ಉಳಿಯದೆ, ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಆದರೆ ಈ ಪ್ರತಿಷ್ಠೆಯ ಸಂಪ್ರದಾಯಕ್ಕೆ ಇದೀಗ ಬರಗಾಲದ ಬಿಸಿ ತಟ್ಟಿದೆ.
ಹೌದು, ಇದು ನಿಮಗೆ ಅಚ್ಚರಿ ಅನಿಸಿದರು ನಿಜ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಗಿ ಗ್ರಾಮಸ್ಥರು ಈ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಗ್ರಾಮದಲ್ಲಿ ಬೀಗರ ಊಟ ಆಯೋಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಹರಗಿ ಗ್ರಾಮದಲ್ಲಿ ಬಹುತೇಕರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಿಂದೆಲ್ಲಾ ಮದುವೆ ಮುಗಿದ ಬಳಿಕ ಕೇವಲ 10 ರಿಂದ 15 ಮಂದಿ ಆಪ್ತರಿಗೆ ಮಾತ್ರ ಸೀಮಿತವಾಗಿ ನಡೆಯುತ್ತಿದ್ದ ಈ ಬೀಗರ ಊಟ, ಈಗೀಗ ದೊಡ್ಡ ಟ್ರೆಂಡ್ ಆಗಿ ಬದಲಾಗಿದೆ ಮತ್ತು ಇದಕ್ಕಾಗಿ ಲಕ್ಷಾಂತರ ರೂಪಾಯಿ ಸುರಿಯಲಾಗುತ್ತಿದೆ.
ಆದರೆ ಈ ಬಾರಿ ಬರಗಾಲದಿಂದ ರೈತರು ಹಾಗೂ ಮಧ್ಯಮ, ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಬೀಗರ ಊಟಕ್ಕೆ ಬ್ರೇಕ್ ಹಾಕಲು ನಿರ್ಧಾರಿಸಿದ್ದಾರೆ.
ಬೀಗರ ಊಟ ನಿಷೇಧ ಮತ್ತು ಭಾರಿ ದಂಡ
ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಊರಿನ ನಿಯಮವನ್ನ ಮೀರಿ ಮುಂದಿನ ದಿನಗಳಲ್ಲಿ ಯಾರಾದರೂ ಬೀಗರ ಊಟ ಮಾಡಿದ್ದು ಕಂಡುಬಂದರೆ, ಅಂಥವರಿಗೆ ಬರೋಬ್ಬರಿ 1 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಕೇವಲ ಊಟ ಹಾಕುವವರಿಗೆ ಮಾತ್ರವಲ್ಲ, ಆ ಊಟಕ್ಕೆ ಹೋಗಿ ಉಂಡು ಬರುವವರಿಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮದ ಮೂಲಕ ಆರ್ಥಿಕ ಶಿಸ್ತು ತರಲು ಗ್ರಾಮಸ್ಥರು ಮುಂದಾಗಿದ್ದಾರೆ.
ಗ್ರಾಮಸ್ಥರ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ
ಹರಗಿ ಗ್ರಾಮಸ್ಥರು ತೆಗೆದುಕೊಂಡಿರುವ ಈ ನಿರ್ಧಾರ ಈಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
"ಇತ್ತೀಚೆಗೆ ಬೀಗರ ಊಟದ ಪದ್ಧತಿ ಮಿತಿಮೀರಿದ್ದು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ಒಗ್ಗಟ್ಟಿನಿಂದ ಈ ನಿರ್ಧಾರ ಕೈಗೊಂಡಿದ್ದೇವೆ" ಹರಗಿ ಸ್ವಸಹಾಯ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ ಕೋಡಿಹಳ್ಳಿ ಹೇಳಿದ್ದಾರೆ.