ಹಾಸನ: ಶಾಂತಿಗ್ರಾಮ ಮತ್ತು ಸುತ್ತಲಿನ ಪ್ರದೇಶಗಳ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು 8 ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಲವು ವರ್ಷಗಳಾದರೂ, ರೈತರಿಗೆ ನಿರೀಕ್ಷಿತ ಪ್ರಯೋಜನ ದೊರೆಯುತ್ತಿಲ್ಲ. ಯೋಜನೆಯಡಿ ಮೂಲಸೌಕರ್ಯ ಸಿದ್ಧವಾಗಿದ್ದರೂ, ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಿರುವ ₹1.06 ಕೋಟಿ ಪಾವತಿಸದೇ ಇರುವುದರಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿ ಕೆರೆಗಳಿಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿದರು.
ಶಾಂತಿಗ್ರಾಮ ಮತ್ತು ಸುತ್ತಲಿನ ಪ್ರದೇಶಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ₹370 ಕೋಟಿ ವೆಚ್ಚದ ಪ್ರಸ್ತಾವ ಹಾಗೂ ಕಾಮಗಾರಿಗಳು ಇವೆ. ಯೋಜನೆಯ ಮೊದಲ ಹಂತದಲ್ಲಿ 160 ಕೆರೆಗಳು ಮತ್ತು 10 ಕಟ್ಟೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿತ್ತು. ಎರಡನೇ ಹಂತದಲ್ಲಿಯೂ ಹೆಚ್ಚುವರಿ ಕೆರೆಗಳಿಗೆ ನೀರು ಒದಗಿಸುವ ಉದ್ದೇಶವಿದೆ. ಆದರೆ, ಕಾಮಗಾರಿ ಪೂರ್ಣಗೊಂಡಿದ್ದರೂ ಹಲವು ವರ್ಷಗಳಿಂದ ಯೋಜನೆಯ ಸಂಪೂರ್ಣ ಪ್ರಯೋಜನ ರೈತರಿಗೆ ದೊರೆಯುತ್ತಿಲ್ಲ ಎಂದು ಹೇಳಿದರು.
ಎರಡು ವರ್ಷಗಳಿಂದ ಈ ವಿಚಾರವಾಗಿ ನಿರಂತರವಾಗಿ ಕಚೇರಿಗಳಿಗೆ ಅಲೆದಾಡಿ, ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಿದ್ದೇನೆ. ಇದೀಗ ಯೋಜನೆ ಕಾರ್ಯಾರಂಭಕ್ಕೆ ಸಿದ್ಧವಾಗಿದ್ದರೂ, ಹಣ ಪಾವತಿಯ ವಿಳಂಬದಿಂದ ರೈತರಿಗೆ ನೀರು ಸಿಗದಂತಾಗಿದೆ. ಈ ಸಂಬಂಧ ಮತ್ತೊಮ್ಮೆ ಪತ್ರ ಬರೆಯುತ್ತಿದ್ದು, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಖರ್ಚು-ವೆಚ್ಚದ ವಿವರಗಳನ್ನು ಗಮನಿಸಿದಾಗ ಬೆಚ್ಚಿಬಿದ್ದಿದ್ದೇನೆ. ಜಾತ್ರೆಯ ಹೆಸರಿನಲ್ಲಿ ಹತ್ತಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲವಾಗಿದೆ ಎಂದು ಎಚ್.ಡಿ. ರೇವಣ್ಣ ಆರೋಪಿಸಿದರು.
ದೇವಸ್ಥಾನದ ಟೆಂಡರ್ಗಳನ್ನು ಪದೇ ಪದೇ ಒಬ್ಬರಿಗೇ ನೀಡಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ತೋರುವ ಇತರರಿಗೆ ಬೆದರಿಕೆ ಹಾಕಿ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತವು ಗುತ್ತಿಗೆದಾರರನ್ನು ಕೂರಿಸಿಕೊಂಡು ಟೆಂಡರ್ ಕರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆಗಳ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಟೆಂಡರ್ ಹಂಚಿಕೆ ಮತ್ತು ಜಾತ್ರಾ ಮಹೋತ್ಸವದ ವೆಚ್ಚದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಜಾತ್ರಾ ಮಹೋತ್ಸವವು ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಬೇಕೇ ಹೊರತು, ಹಣದ ದುರುಪಯೋಗದ ಆರೋಪಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ಆಗಬಾರದು. ಜಾತ್ರೆಯ ಹೆಸರಿನಲ್ಲಿ ಹಣ ದುರುಪಯೋಗ ಆಗುತ್ತಿದೆ ಎಂಬ ಆರೋಪಗಳಿಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಹೂವಿನ ಅಲಂಕಾರಕ್ಕೆ 90 ಲಕ್ಷ ರೂ., ಡ್ಯಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ರೂ. ಹಾಗೂ ಕಂಟ್ರೋಲ್ ರೂಂಗೆ 50 ಲಕ್ಷ ರೂ. ಖರ್ಚು ಮಾಡುತ್ತಿರುವುದನ್ನ ಪ್ರಶ್ನಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಬಂದು ಹೋಗಲು 4 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 11ರ ವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ.