ಹಾಸನ: ಇತ್ತೀಚೆಗೆ ವಿವಾದದ ಕಾರಣಕ್ಕೆ ಸುದ್ದಿಯಾಗಿದ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಇದೀಗ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕಾಣಿಸಿಕೊಂಡಿದ್ದಾರೆ.
ಹಾಸನಾಂಬೆ ದೇವಾಲಯಕ್ಕೆ ಒಟ್ಟಿಗೆ ಭೇಟಿ ನೀಡಿದ ಇಬ್ಬರೂ ಅಧಿಕಾರಿಗಳು ಪೂಜೆ ಸಲ್ಲಿಸಿ, ಪರಸ್ಪರ ಕುಶಲೋಪರಿ ವಿಚಾರಿಸುವ ಮೂಲಕ ಸೌಹಾರ್ದದ ಸಂದೇಶ ನೀಡಿದ್ದಾರೆ.
ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಒಟ್ಟಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಡಿಸಿ, ಎಸ್ಪಿಗೆ ಹಾಸನಾಂಬೆ ದರ್ಶನೋತ್ಸವದ ವ್ಯವಸ್ಥೆಗಳು ಹಾಗೂ ಉತ್ಸವದ ಕುರಿತು ಮಾಹಿತಿ ಹಂಚಿಕೊಂಡರು. ಮಂಗಳಾರತಿ ತಟ್ಟೆಗೆ ಕಾಣಿಕೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಎಸ್ಪಿ ಹಣ ನೀಡಿದ ಪ್ರಸಂಗವೂ ಗಮನ ಸೆಳೆಯಿತು.
ದೇವಾಲಯದ ಬಳಿ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಇಬ್ಬರೂ ಅಧಿಕಾರಿಗಳು ಒಟ್ಟಾಗಿರುವ ಸಂದೇಶ ನೀಡಿದರು.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಗಮನ ಸೆಳೆದಿದೆ. ಇನ್ನು ಮುಖ್ಯ ಕಾರ್ಯದರ್ಶಿ ಜೊತೆಗಿನ ಸಭೆಯ ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ನಡುವಿನ ಮುನಿಸು ಸುಖಾಂತ್ಯ ಕಂಡಿದ್ದು, ಇಬ್ಬರು ಪರಸ್ಪರ ಒಂದಾಗಿ ಮಹೋತ್ಸವದ ತಯಾರಿಗೆ ಕೈಜೋಡಿಸಿದ್ದಾರೆ.