ಬೆಳಗಾವಿ: ಇಲ್ಲಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಗಾಲ್ಫ್ ಸೈಡ್ ಕೆಫೆಯಲ್ಲಿ ಕೈಫ್ ಶೇರ್ಖಾನ್ ಎಂಬ ಯುವಕನ ಮೇಲೆ ಮುಸುಕು ಧರಿಸಿದ್ದ ನಾಲ್ವರು ದುಷ್ಕರ್ಮಿಗಳು ತಲವಾರು ಮತ್ತು ಮಚ್ಚುಗಳಿಂದ ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ಆರೋಪಿಗಳು ಕೆಫೆಯ ಪೀಠೋಪಕರಣಗಳನ್ನೂ ಧ್ವಂಸಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೃತ್ಯ ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಳೆಯ ದ್ವೇಷವೇ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಾಯಗೊಂಡ ಯುವಕನ ಸಂಬಂಧಿಕರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಎಪಿಎಂಸಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ನಾರಾಯಣ ಬರಮನಿ, ಆರೋಪಿಗಳನ್ನು ಬಂಧಿಸುವುದಾಗಿ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.