ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  
ರಾಜ್ಯ

NLSIU ಕ್ಯಾಂಪಸ್ ವಿಸ್ತರಣೆಗೆ ಭೂಮಿ ಮಂಜೂರು, ಆರ್ಥಿಕ ನೆರವಿಗೆ ಸರ್ಕಾರ ಬದ್ಧ: CM ಡಿಕೆ ಶಿವಕುಮಾರ್; Video

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯ 34ನೇ ವಾರ್ಷಿಕ ಘಟಿಕೋತ್ಸವ ಇಂದು ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಕ್ಯಾಂಪಸ್ ವಿಸ್ತರಣೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಕಾನೂನು ಶಿಕ್ಷಣದ ಮೂಲಸೌಕರ್ಯವನ್ನು ಬಲಪಡಿಸಲು ಅಗತ್ಯವಿರುವ ಭೂಮಿ ಮಂಜೂರು ಮಾಡುವುದರ ಜತೆಗೆ ಆರ್ಥಿಕ ನೆರವನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿರುವ ಎನ್‌ಎಲ್‌ಎಸ್‌ಐಯುನಲ್ಲಿ ದಕ್ಷಿಣ ಬ್ಲಾಕ್, ಸಭಾಂಗಣ ಮತ್ತು ವಿದ್ಯಾರ್ಥಿ ಕೇಂದ್ರದ ನಿರ್ಮಾಣಕ್ಕೆ ಇಂದು ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿ ಕೆ ಶಿವಕುಮಾರ್ ಮಾತನಾಡಿದರು.

ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದಕ್ಕೆ ನನಗೆ ಹೆಮ್ಮೆಯಿದೆ. ನಾವು ರಾಜ್ಯದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದಾಗ, ದೇಶದ ಮೊದಲ ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆಯಾದ ಸಂದರ್ಭದಲ್ಲಿ ದೇಶಾದ್ಯಂತ ಅದನ್ನು ಅತ್ಯಂತ ಉತ್ಸಾಹದಿಂದ ಸಂಭ್ರಮಿಸಿದ್ದೆವು ಎಂದು ಹೇಳಿದರು.

ವಿಶ್ವವಿದ್ಯಾಲಯದ ವಿಸ್ತರಣೆಗೆ ಸರ್ಕಾರದ ಬೆಂಬಲದ ಭರವಸೆ ನೀಡಿದ ಮುಖ್ಯಮಂತ್ರಿ, ಭೂಮಿ ಅಥವಾ ಆರ್ಥಿಕ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ನಿಮಗೆ ಏಳು ಎಕರೆ ಬೇಕಾದರೂ, 10 ಎಕರೆ ಬೇಕಾದರೂ, ಎಷ್ಟು ಬೇಕೋ ಅಷ್ಟು ಭೂಮಿ ಮಂಜೂರು ಮಾಡುವುದರ ಜತೆಗೆ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ಮೂಲಸೌಕರ್ಯ ವಿಸ್ತರಣೆಗೆ ಅಭಿನಂದನೆ ಸಲ್ಲಿಸಿದ ಅವರು, ಉಪ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಮತ್ತು ಅವರ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರತಿಷ್ಠಿತ ಈ ಸಂಸ್ಥೆಯನ್ನು ರಕ್ಷಿಸಿ, ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಈ ವಿಸ್ತರಣೆಯು ಪ್ರಜಾಪ್ರಭುತ್ವವನ್ನು ಬಲಪಡಿಸಲು ಹಾಗೂ ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯಲು ಬದ್ಧರಾಗಿರುವ ಭವಿಷ್ಯದ ನಾಯಕರನ್ನು ರೂಪಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನ್ಯಾಯಾಂಗಕ್ಕೆ ಹೊಸ ಕಟ್ಟಡ ನಿರ್ಮಿಸುವ ಯೋಜನೆಯ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿಗಳ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ ಪ್ರಸ್ತಾವನೆಯೊಂದರ ಕುರಿತು ಕೆಲಸ ಮಾಡುತ್ತಿದೆ ಎಂದರು.

ಅತ್ತಾರ ಕಚೇರಿ ಒಂದು ಐತಿಹಾಸಿಕ ಕಟ್ಟಡ. ದೇಶದಲ್ಲಿ ಶಾಸಕಾಂಗದ ಎದುರಿಗೇ ನ್ಯಾಯಾಂಗ ಇರುವ ಏಕೈಕ ಸ್ಥಳ ಇದಾಗಿದೆ. ನಾವು ಮತ್ತೊಂದು ಐತಿಹಾಸಿಕ ಕಟ್ಟಡವನ್ನು ನಿರ್ಮಿಸಲು ಬಯಸಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಈ ತಿಂಗಳಲ್ಲೇ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಸ್ತಾವಿತ ನ್ಯಾಯಾಂಗ ಮೂಲಸೌಕರ್ಯ ಮತ್ತು ಎನ್‌ಎಲ್‌ಎಸ್‌ಐಯು ಕ್ಯಾಂಪಸ್ ವಿಸ್ತರಣೆ ಎರಡೂ ಪ್ರಜಾಸತ್ತಾತ್ಮಕ ಸಂಸ್ಥೆಗಳು ಹಾಗೂ ಕಾನೂನು ಶಿಕ್ಷಣವನ್ನು ಬಲಪಡಿಸುವಲ್ಲಿ ಪರಸ್ಪರ ಪೂರಕವಾಗಲಿವೆ ಎಂದು ಅವರು ಆಶಿಸಿದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ಕಳೆದ ಒಂದೆರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಯಿತು. ಹೀಗಾಗಿ, ಸಂಸ್ಥೆಯ ಸ್ಥಾಪನೆಯ ನಂತರದ ಬೆಳವಣಿಗೆಗೆ ಪೂರಕವಾಗಿ ಹೆಚ್ಚುವರಿ ಮೂಲಸೌಕರ್ಯಗಳ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಈಗಾಗಲೇ ದೇಶದ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಅಗ್ರಸ್ಥಾನದಲ್ಲಿರುವ ಈ ಸಂಸ್ಥೆಗೆ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸಲು ಇದು ಮತ್ತೊಂದು ಮಾರ್ಗವಾಗಿದೆ ಎಂದರು.

ನ್ಯಾಷನಲ್ ಲಾ ಸ್ಕೂಲ್‌ನ ಆಡಳಿತ ಮಂಡಳಿ, ನಿರ್ವಹಣಾ ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ಈ ಅಭಿವೃದ್ಧಿ ಕಾರ್ಯಕ್ಕೆ ಅತ್ಯಂತ ಅಗತ್ಯವಾಗಿದ್ದ ಏಳು ಎಕರೆ ಅಮೂಲ್ಯ ಜಮೀನನ್ನು ಒದಗಿಸಿದ ಕರ್ನಾಟಕ ಸರ್ಕಾರಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಂಗಶಂಕರದ ಸಹ-ಸಂಸ್ಥಾಪಕಿ ಹಾಗೂ ನಟಿ ಅರುಂಧತಿ ನಾಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ ವೇಳೆ ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ..!

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

ಸ್ಪಾ ಮಾಲೀಕರಿಗೆ ಬೆದರಿಕೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ 1 ಲಕ್ಷ ರೂ ಸುಲಿಗೆ ಆರೋಪ: ನಾಲ್ವರ ಸಹಿತ 6 ಮಂದಿ ಅರೆಸ್ಟ್‌

'narcissistic ಕಿರುಕುಳದಿಂದ ನಟನೆಗೇ ವಿದಾಯ ಹೇಳಲು ಮುಂದಾಗಿದ್ದೆ, ಬದುಕುಳಿಯುವುದೇ ಸವಾಲಾಗಿತ್ತು': ಕರಾಳ ದಿನಗಳ ನೆನೆದ ನಟಿ ಅನುಪಮಾ ಪರಮೇಶ್ವರನ್‌-Video

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!