"ಸಕ್ಕರೆ ಎಂಎಸ್ಪಿ ಅಂದರೆ ಮಿನಿಮಮ್ ಸಪೋರ್ಟ್ ಪ್ರೈಸ್ ಅಲ್ಲ, ಅದು ಮಿಲ್ಲರ್ಗಳ ಕನಿಷ್ಠ ಮಾರಾಟ ದರ (Minimum Selling Price). ಸರ್ಕಾರ ನಿಗದಿಪಡಿಸಿದ 31 ರೂಪಾಯಿಗಿಂತ ಮಾರುಕಟ್ಟೆಯಲ್ಲಿ ಸಕ್ಕರೆ ಈಗಾಗಲೇ 50 ರೂಪಾಯಿಯಿಂದ 60 ರೂಪಾಯಿಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ನವರಾತ್ರಿ ಹಬ್ಬದ ನಂತರ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತರ ಬೇಡಿಕೆಗಳನ್ನು ಪರಿಶೀಲಿಸಲು ತಜ್ಞರ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಎಂಎಸ್ಪಿ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಮಿತಿಯು ಧನಾತ್ಮಕ ಶಿಫಾರಸು ನೀಡಲಿದೆ.
ರೈತರು ಕೇಳಿರುವ ಕನಿಷ್ಠ ಬೆಂಬಲ ಬೆಲೆ (MSP) ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ಸಮಿತಿಯು ಧನಾತ್ಮಕವಾಗಿ ಪರಿಗಣಿಸಿ, ಶೀಘ್ರವಾಗಿ ಶಿಫಾರಸುಗಳನ್ನು ನೀಡುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆಗಳಿಲ್ಲದೆ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದರು.
ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ನ್ನು ಕೇಂದ್ರ ಸರ್ಕಾರ ಖರೀದಿಸುತ್ತಿದ್ದು, ಕಳೆದ ವರ್ಷ 165 ಲೀಟರ್ ಎಥೆನಾಲ್ ಖರೀದಿಸಲಾಗಿದೆ. ಕಬ್ಬಿನಿಂದ ಬರುವ ಎಥೆನಾಲ್ ಪ್ರಮಾಣವನ್ನು ಹೆಚ್ಚುವರಿಯಾಗಿ ಖರೀದಿಸುವ ಕುರಿತು ಪೆಟ್ರೋಲಿಯಂ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಭರವಸೆ ನೀಡಿದರು. ರೈತರು ಸಮಿತಿಯೊಂದಿಗೆ ಸಹಕರಿಸಬೇಕು ಮತ್ತು ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಜೋಶಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳು ರಾಜ್ಯ ಸಲಹಾ ಬೆಲೆ (SAP) ಪರಿಗಣಿಸಬೇಕು ಹಾಗೂ ತೂಕ ಮತ್ತು ಯಾಂತ್ರಿಕ ಕಟಾವಿನ ನಷ್ಟದ (ವೇಸ್ಟೇಜ್) ಸಮಸ್ಯೆಗಳನ್ನು ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಬ್ಬಿನ ನಷ್ಟ ಹೆಚ್ಚಿದ್ದು, ಅದನ್ನು ತಗ್ಗಿಸಲು ಫ್ಯಾಕ್ಟರಿಗಳಿಗೆ ಸೂಚಿಸಬೇಕು ಎಂದರು.