ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕನಕಪುರ ರಸ್ತೆ ಟೋಲ್ನಿಂದ ಅಂಜಾನಪುರ ಕಡೆ ಬರ್ತಿದ್ದ ಕೆಮಿಕಲ್ ತುಂಬಿದ್ದ ಟ್ಯಾಂಕರ್ ಒಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ.
ಇಂದು ಸಂಜೆ ಚೆನ್ನೈನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಟ್ಯಾಂಕರ್, ಕನಕಪುರ ರಸ್ತೆಯ ನೈಸ್ ಟೋಲ್ ಬಳಿ ಟೈರ್ ಬ್ಲಾಸ್ಟ್ ಆಗಿ, ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಳಿಕ ಬೆಂಕಿ ಹೊತ್ತಿಕೊಂಡಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ತಲಘಟ್ಟಪುರ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದ್ರೂ, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ಒಂದುವರೆ ಗಂಟೆಯಿಂದ ಹೊತ್ತಿ ಉರಿಯುತ್ತಿದ್ದು, ಇದರಿಂದ ನೈಸ್ ರಸ್ತೆಯಲ್ಲಿ ಕನಿಷ್ಠ ಐದು ಕಿಲೋ ಮೀಟರ್ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ಜೀವ ಹಾನಿ ಸಂಭವಿಸಿಲ್ಲ.
ಟ್ಯಾಂಕರ್ ಒಳಗೆ ನಾಲ್ಕಾರು ಟ್ಯಾಂಕ್ ಇವೆ. ಇನ್ನೂ ಎರಡು ಟ್ಯಾಂಕ್ನಲ್ಲಿ ಕೆಮಿಕಲ್ ಇದೆ. ಅದು ಬ್ಲಾಸ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದು ಬ್ಲಾಸ್ಟ್ ಆಗುವ ತನಕ ಬೆಂಕಿ ಹತೋಟಿಗೆ ಬರುವುದಿಲ್ಲ. ಹೀಗಾಗಿ ಕಂಟ್ರೋಲ್ಡ್ ಪರಿಸರದಲ್ಲಿ ಬ್ಲಾಸ್ಟ್ ಮಾಡಿಸಲು ಅಗ್ನಿಶಾಮಕ ಸಿಬ್ಬಂದಿ ಕ್ರಮಕೈಗೊಂಡಿದ್ದಾರೆ.