ಬೆಂಗಳೂರು: ಮೋಜು-ಮಸ್ತಿಯ ಹೆಸರಿನಲ್ಲಿ ನಡುರಾತ್ರಿ ಪಟಾಕಿ ಸಿಡಿಸಿ, ಭಾರೀ ಶಬ್ದದೊಂದಿಗೆ ಹಾಡುಗಳನ್ನು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ, ಮಾಜಿ ಸಂಸದೆ ರಮ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರಸಿದ್ಧ 'ಫನ್ ವರ್ಲ್ಡ್' ಆವರಣದಲ್ಲಿ ಮಧ್ಯರಾತ್ರಿ ಸುಮಾರು 3 ಗಂಟೆಯ ವೇಳೆಗೆ ನಡೆದ ಈ ಆಚರಣೆಯನ್ನು ಖಂಡಿಸಿರುವ ಅವರು, ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಘಟನೆ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿರುವ ನಟಿ ರಮ್ಯಾ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಸಿಡಿಸುವುದನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ನಿಷೇಧಿಸಿದೆ.
ವಿಶೇಷ ಕಾರ್ಯಕ್ರಮಗಳಿಗೆ ಅನುಮತಿ ಇದ್ದರೂ ಸಹ ಮಧ್ಯರಾತ್ರಿಯ ನಂತರ ಲೌಡ್‌ಸ್ಪೀಕರ್‌ಗಳನ್ನು ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರ ಶಾಂತಿಗೆ ಭಂಗ ತರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ಅಥವಾ ಹಬ್ಬ-ಹರಿದಿನಗಳಲ್ಲಿ ಸಾರ್ವಜನಿಕರು ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಪ್ರತಿಯೊಂದು ಕಾರ್ಯಕ್ರಮದ ಹೆಸರಿನಲ್ಲೂ ಸಾರ್ವಜನಿಕರು ಪ್ರತಿದಿನ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದು ಖಂಡಿತವಾಗಿಯೂ ಸರಿಯಲ್ಲ.
ಫನ್ ವರ್ಲ್ಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಮುಖ ಆಸ್ಪತ್ರೆಗಳಿವೆ, ನೂರಾರು ಹಿರಿಯ ನಾಗರಿಕರು ಹಾಗೂ ಪುಟ್ಟ ಮಕ್ಕಳು ವಾಸಿಸುತ್ತಿದ್ದಾರೆ. ಮಧ್ಯರಾತ್ರಿ 3 ಗಂಟೆಗೆ ಈ ರೀತಿ ಅತಿಯಾದ ಶಬ್ದ ಮಾಡುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕಿರಿಯ-ಹಿರಿಯರ ನಿದ್ದೆಗೆ ಭಂಗ ಉಂಟಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಜವಾಬ್ದಾರಿ ರಹಿತ ಕೃತ್ಯಗಳು ನಗರದಲ್ಲಿ ಮರುಕಳಿಸದಂತೆ ತಡೆಯಲು ಜಾಗೃತಿ ಮೂಡಿಸುವುದರ ಜೊತೆಗೆ, ಮಧ್ಯರಾತ್ರಿ ನಿಯಮ ಮೀರಿ ಕಾರ್ಯಕ್ರಮ ನಡೆಸಿದ ಆಯೋಜಕರು ಹಾಗೂ ಫನ್ ವರ್ಲ್ಡ್ ಆಡಳಿತ ಮಂಡಳಿಯ ವಿರುದ್ಧ ಬೆಂಗಳೂರು ನಗರ ಪೊಲೀಸರು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಮ್ಯಾ ಒತ್ತಾಯಿಸಿದ್ದಾರೆ.