ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಕಡಿಮೆ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಫಲಿತಾಂಶ ಆಧಾರಿತ ಮಾದರಿಯನ್ನು ರೂಪಿಸಿ, ಅದರ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ತಜ್ಞರ ಸಮಿತಿಯನ್ನು ರಚಿಸಿದೆ.
ಈ ವರ್ಷ ರಾಜ್ಯದ 17 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಒಟ್ಟು 4,704 ಸೀಟುಗಳ ಪೈಕಿ 1,402 ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಮತ್ತು ರಾಷ್ಟ್ರೀಯ ಮಾನ್ಯತಾ ಮಂಡಳಿ (NBA)ಯಂತಹ ಸಂಸ್ಥೆಗಳು ವಿಷಯಾಧಾರಿತ ಜ್ಞಾನ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ನಾವೀನ್ಯತೆ ಮತ್ತು ವೃತ್ತಿಪರ ನೈತಿಕತೆಯಂತಹ ಅಗತ್ಯ ಕಾರ್ಯಕ್ರಮದ ಫಲಿತಾಂಶಗಳನ್ನು (Programme outcomes) ವ್ಯಾಖ್ಯಾನಿಸಿವೆ. ಈ ಗುರಿಗಳನ್ನು ಸಾಧಿಸಲು ಸಾಂಪ್ರದಾಯಿಕ ಪಠ್ಯಕ್ರಮದ ಬೋಧನೆಯ ಆಚೆಗೂ ವ್ಯವಸ್ಥಿತ ಕಲಿಕಾ ಅನುಭವಗಳನ್ನು ಒದಗಿಸುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಅಗತ್ಯ ಜ್ಞಾನ, ಪ್ರಾಯೋಗಿಕ ಅನ್ವಯ, ಕೌಶಲಗಳು, ಮನೋಭಾವ ಮತ್ತು ವೃತ್ತಿಪರ ಸಾಮರ್ಥ್ಯಗಳ ಮೂಲಕ ನಿಗದಿತ ಕಾರ್ಯಕ್ರಮದ ಫಲಿತಾಂಶಗಳನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಸಮಿತಿಗೆ 11 ಪ್ರಮುಖ ಜವಾಬ್ದಾರಿಗಳನ್ನು ವಹಿಸಿದೆ.
ಎಐಸಿಟಿಇ/ಎನ್‌ಬಿಎ ಚೌಕಟ್ಟಿನಡಿ ಅನ್ವಯವಾಗುವ ಕಾರ್ಯಕ್ರಮದ ಫಲಿತಾಂಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅವುಗಳ ನೈಜ ಆಶಯಕ್ಕೆ ಅನುಗುಣವಾಗಿ ಸಾಧಿಸುವುದನ್ನು ಖಚಿತಪಡಿಸಲು ಅಗತ್ಯ ಚೌಕಟ್ಟನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸಮಿತಿಗೆ ಸೂಚಿಸಿದ್ದೇವೆ ಎಂದು ರಾಯರೆಡ್ಡಿ ಹೇಳಿದ್ದಾರೆ.
ವಿದ್ಯಾರ್ಥಿಗಳ ತರಬೇತಿ, ದತ್ತಾಂಶದ ಗುಣಮಟ್ಟ, ಪ್ರವೇಶ ನಿಯಂತ್ರಣ ಮತ್ತು ನಿಯತಕಾಲಿಕ ಪರಿಶೀಲನೆಗಳ ಮೇಲ್ವಿಚಾರಣೆಯನ್ನೂ ಸಮಿತಿ ನಡೆಸಲಿದೆ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಅಳೆಯಬಹುದಾದ ಸುಧಾರಣೆಗಳನ್ನು ಸಾಧಿಸುವ ಹೊಣೆಗಾರಿಕೆಯೂ ಸಮಿತಿಯ ಮೇಲಿರಲಿದೆ ಎಂದು ಅವರು ತಿಳಿಸಿದ್ದಾರೆ.
ಯೋಜನೆಗಳು, ಅಂತರಶಿಸ್ತೀಯ ಕಲಿಕೆ ಮತ್ತು ಉದ್ಯಮ ಕ್ಷೇತ್ರದ ಅನುಭವದ ಮೂಲಕ ವಿದ್ಯಾರ್ಥಿಗಳು ಅಗತ್ಯ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುವ ಶೈಕ್ಷಣಿಕ ವ್ಯವಸ್ಥೆಗಳನ್ನು ಸಮಿತಿ ರೂಪಿಸಲಿದೆ.
ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP) ರೂಪಿಸಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಿಕೆ, ಸಾಮರ್ಥ್ಯಗಳು ಮತ್ತು ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು, ಕಲಿಕೆಯಲ್ಲಿನ ಕೊರತೆಗಳನ್ನು ಗುರುತಿಸಲು ಹಾಗೂ ಸಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳನ್ನೂ ಅಭಿವೃದ್ಧಿಪಡಿಸಲಿದೆ.
ಇದಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ವೈಯಕ್ತಿಕ ಅಭಿವೃದ್ಧಿ ಮತ್ತು ವೃತ್ತಿಜೀವನದ ಮಾರ್ಗಸೂಚಿಗಳನ್ನು ಸಿದ್ಧಪಡಿಸುವುದು, ಕೇಂದ್ರೀಕೃತ ಮೇಲ್ವಿಚಾರಣಾ ಪೋರ್ಟಲ್ ಮೂಲಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳನ್ನು ಸಂಯೋಜಿಸುವುದು, ದತ್ತಾಂಶ ಸಂಗ್ರಹಣೆ ಮತ್ತು ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಸ್ವಯಂಚಾಲಿತಗೊಳಿಸುವುದು ಸಮಿತಿಯ ಜವಾಬ್ದಾರಿಗಳಾಗಿವೆ.
ಹಂತ ಹಂತವಾಗಿ ಅನುಷ್ಠಾನಗೊಳಿಸುವ ಯೋಜನೆಯನ್ನು ರೂಪಿಸಿ, ಅಳೆಯಬಹುದಾದ ಗುರಿಗಳು, ಕಾಲಮಿತಿಗಳು ಮತ್ತು ನಿರ್ದಿಷ್ಟ ಜವಾಬ್ದಾರಿಗಳನ್ನು ನಿಗದಿಪಡಿಸುವ ಕಾರ್ಯವನ್ನೂ ಸಮಿತಿ ನಿರ್ವಹಿಸಲಿದೆ.
ದೇಶದ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಹಿರಿಯ ಪ್ರಾಧ್ಯಾಪಕರನ್ನು ಇಲಾಖೆಯು ಸಮಿತಿಗೆ ಆಯ್ಕೆ ಮಾಡಿದೆ. ಇವರಲ್ಲಿ ಐಐಟಿ ಮದ್ರಾಸ್, ತಮಿಳುನಾಡಿನ ಬನ್ನಾರಿ ಅಮ್ಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಡಪಾದ ಯೋಗಿ ವೇಮನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸೇರಿದ್ದಾರೆ.