ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಬಾವಿ ರಿಂಗ್ ರೋಡ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಹಾಗೂ ವಕೀಲರೊಬ್ಬರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ನಡೆದಿದೆ.
ವೃತ್ತಿಯಲ್ಲಿ ವಕೀಲರಾಗಿದ್ದ ಶ್ರೀರಾಮ್ ಎಂಬುವವರೇ ಕೊಲೆಯಾದ ದುರದೃಷ್ಟಕರ ವ್ಯಕ್ತಿ. ಆರಂಭದಲ್ಲಿ ಶ್ರೀರಾಮ್ ಅವರ ಸಾವು ಅಸಹಜ ಸಾವು ಹಾಗೂ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆಯಲ್ಲಿ ಇದು ಕೊಲೆ ಎಂಬುದು ಬಹಿರಂಗವಾಗಿದೆ.
ಕಳೆದ ಅಕ್ಟೋಬರ್ 09 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನಾಗರಬಾವಿ ರಿಂಗ್ ರೋಡ್ ಬಳಿ ವಕೀಲ ಶ್ರೀರಾಮ್ ಏಕಾಏಕಿ ಅಸ್ವಸ್ಥನಾಗಿ ಬಿದ್ದಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶ್ರೀರಾಮ್ ಮೃತಪಟ್ಟಿದ್ದರು.
ಶ್ರೀರಾಮ್ ಸಾವು ಹೃದಯಾಘಾತದಿಂದ ಸಂಭವಿಸಿರಬಹುದು ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಹೀಗಾಗಿ ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬಸ್ಥರಿಗೆ ಅನುಮಾನ ವ್ಯಕ್ತವಾಗಿ ಪರಿಶೀಲಿಸಿದಾಗ, ಘಟನೆ ನಡೆದ ದಿನ ಶ್ರೀರಾಮ್ ಜೊತೆಗೆ ಆಟೋ ಚಾಲಕನೊಬ್ಬ ಗಲಾಟೆ ಮಾಡಿದ್ದ ವಿಚಾರ ಗೊತ್ತಾಗಿದೆ.
ಅಕ್ಟೋಬರ್ 9ರಂದು ಶ್ರೀರಾಮ್ ಅವರು ಅಂಬೇಡ್ಕರ್ ಕಾಲೇಜು ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಗೆ ಹೋಗಲು ಆಟೋ ಕೇಳಿದ್ದರು. ಈ ವೇಳೆ ಆಟೋ ಚಾಲಕ ಮೇಘರಾಜನ ಜೊತೆಗೆ ಬಾಡಿಗೆ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಆಟೋ ಬೇಡವೆಂದು ಶ್ರೀರಾಮ್ ಮುಂದೆ ನಡೆದುಕೊಂಡು ಹೊರಟಿದ್ದರು. ಕೋಪಗೊಂಡ ಆಟೋ ಚಾಲಕ ಮೇಘರಾಜ, ತನ್ನ ಸಹಚರರ ಜೊತೆ ಸೇರಿ ಶ್ರೀರಾಮ್ ಅವರನ್ನು ಬೆನ್ನಟ್ಟಿ ಬಂದು ಅವಾಚ್ಯವಾಗಿ ಬೈದು ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಅಲ್ಲದೆ, ಅವರ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಹಲ್ಲೆಯಿಂದಾಗಿ ತಲೆಗೆ ಪೆಟ್ಟು ಬಿದ್ದು ಮುಂದೆ ನಡೆಯುತ್ತಿದ್ದಂತೆಯೇ ಶ್ರೀರಾಮ್ ಅಸ್ವಸ್ಥಗೊಂಡು ಬಿದ್ದಿದ್ದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶ್ರೀರಾಮ್ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸಾವು ಸಂಭವಿಸಿದೆ ಎಂಬ ಸತ್ಯ ಹೊರಬಿದ್ದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆಟೋ ಚಾಲಕ ಮೇಘರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಶ್ರೀರಾಮ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕೊಲೆ ಎಂದು ಬದಲಾಯಿಸಿಕೊಂಡು, ಮುಖ್ಯ ಆರೋಪಿ ಆಟೋ ಚಾಲಕ ಮೇಘರಾಜನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.