2026-27ನೇ ಸಾಲಿನ ಐಷಾರಾಮಿ ಪ್ರವಾಸಿ ರೈಲಿನ ಹೊಸ ಋತುವಿಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರಿ ರೈಲಿನ ಮೊದಲ ಸಂಚಾರಕ್ಕೆ ಚಾಲನೆ ನೀಡಿದರು.
ರಾಜ್ಯದ ಐತಿಹಾಸಿಕ ಪರಂಪರೆ ಮತ್ತು ಪ್ರಾಕೃತಿಕ ಸೌಂದರ್ಯವನ್ನುಈ ರೈಲು ಪರಿಚಯಿಸಲಿದೆ. ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿನ ಹೊಸ ಋತುವಿನ ಸಂಚಾರಕ್ಕೆ ಚಾಲನೆ ನೀಡಿರುವುದು ಸಂತಸ ತಂದಿದೆ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಮತ್ತೊಂದು ಪ್ರವಾಸಿ ಋತು ಆರಂಭವಾಗಿದೆ ಎಂದು ಹೇಳಿದರು.
‘ಪ್ರೈಡ್ ಆಫ್ ಕರ್ನಾಟಕ’ದ ಮೊದಲ ಪ್ರವಾಸದ ಎಲ್ಲ ಆಸನಗಳು ಭರ್ತಿಯಾಗಿರುವುದು ಸಂತಸದ ಸಂಗತಿ. ನಮ್ಮ ರಾಜ್ಯದ ಭವ್ಯ ಐತಿಹಾಸಿಕ ಪರಂಪರೆ, ವನ್ಯಜೀವಿ ಸಂಪತ್ತು, ರಮಣೀಯ ಪ್ರಕೃತಿ ದೃಶ್ಯಗಳು ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು 75 ಪ್ರವಾಸಿಗರು ಸಜ್ಜಾಗಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಪ್ರವಾಸಿ ಋತುವಿನಲ್ಲಿ ಒಟ್ಟು 13 ಪ್ರವಾಸಗಳನ್ನು ಆಯೋಜಿಸಲು ಯೋಜಿಸಲಾಗಿದೆ. ಕರ್ನಾಟಕವನ್ನು ಐಷಾರಾಮಿ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ರೂಪಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರವಾಸಿಗರಿಗೂ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ವಿಶಿಷ್ಟ ಅನುಭವಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ನವೀಕೃತ ರೂಪದಲ್ಲಿ ಮಾರುಕಟ್ಟೆಗೆ ಬಂದಿರುವ ಈ ಐಷಾರಾಮಿ ರೈಲಿಗೆ ಪ್ರವಾಸಿಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ದೇಶದ ಪ್ರಮುಖ ಪ್ರವಾಸಿಗರ ಜೊತೆಗೆ ಸ್ಪೇನ್ ಸೇರಿದಂತೆ ವಿವಿಧ ದೇಶಗಳ ವಿದೇಶಿ ಅತಿಥಿಗಳು ಈ ಸುವರ್ಣ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಐಆರ್‌ಸಿಟಿಸಿ ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಜಂಟಿಯಾಗಿ ಈ ಐಷಾರಾಮಿ ರೈಲನ್ನು ನಿರ್ವಹಿಸುತ್ತಿವೆ.
ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ತಾಂತ್ರಿಕ ನವೀಕರಣ ಹಾಗೂ ಹೊರಾಂಗಣದ ವಿನ್ಯಾಸವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಹಿಂದೆ ಕೇವಲ ಮಲಗುವ ಕೋಣೆಗಳನ್ನು ಮಾತ್ರ ಹೊಂದಿದ್ದ ಕ್ಯಾಬಿನ್‌ಗಳನ್ನು ಈಗ ಪ್ರತ್ಯೇಕ 'ಲಿವಿಂಗ್ ರೂಮ್' ಮತ್ತು 'ಬೆಡ್ ರೂಮ್' ಒಳಗೊಂಡಂತೆ ಮರುವಿನ್ಯಾಸಗೊಳಿಸಲಾಗಿದೆ.
ದಕ್ಷಿಣ ಭಾರತದ ಮಹಾನ್ ರಾಜವಂಶಗಳಾದ ಹೊಯ್ಸಳ, ಚಾಲುಕ್ಯ ಹಾಗೂ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಥೀಮ್ ಆಧಾರಿಸಿ ಒಳಾಂಗಣವನ್ನು ಹೊಳೆಯುವ ಮರದ ಮೇಲ್ಮೈ ಮತ್ತು ಸುಂದರ ವಿನ್ಯಾಸದಿಂದ ಸಜ್ಜುಗೊಳಿಸಲಾಗಿದೆ.