ಶ್ರವಣಬೆಳಗೊಳ: ‘ಅನ್ನರಾಮಯ್ಯ’ ಎಂಬ ಹೆಸರಿನಿಂದಲೂ ಜನಪ್ರಿಯರಾಗಿರುವ ಸಿದ್ದರಾಮಯ್ಯ, ರಾಜ್ಯ ರಾಜಕೀಯ ಕ್ಷೇತ್ರದ ಧ್ರುವತಾರೆ. ಅಂತಹ ಶ್ರೇಷ್ಠ ನಾಯಕರು ನನ್ನ ರಾಜಕೀಯ ಗುರುಗಳು ಎಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆ ಇದೆ ಎಂದು ಅಬಕಾರಿ ಸಚಿವ ಶಿವಲಿಂಗೇಗೌಡ ಶನಿವಾರ ಹಾಡಿ ಹೊಗಳಿದ್ದಾರೆ.
ಕಬ್ಬಾಳು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ದಾಸಶ್ರೇಷ್ಠ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಹಾಗೂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಿವಲಿಂಗೇಗೌಡ, ಶಾಸಕನಾಗಿ ಜನಸೇವೆ ಆರಂಭಿಸಿ, ಇಂದು ಸಚಿವನಾಗಿ ಬೆಳೆಯಲು ಮಾರ್ಗದರ್ಶನ ನೀಡಿ, ನನ್ನ ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾದ ಸಿದ್ದರಾಮಯ್ಯನವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಅವರ ನಾಯಕತ್ವ, ಮಾರ್ಗದರ್ಶನ ಹಾಗೂ ಜನಪರ ಆಡಳಿತದ ಬದ್ಧತೆ ಸದಾ ನನಗೆ ಪ್ರೇರಣೆಯಾಗಿದೆ ಎಂದರು.
ಈ ರಾಜ್ಯದ ಮುಖ್ಯ ನಾಯಕರ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೇರಿದ್ದಾರೆ. ಮಾತಿಗೆ ತಕ್ಕಂತೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವ ನಾಯಕರು ಯಾರದರೂ ಇದ್ದರೆ ಅದು ಸಿದ್ದರಾಮಯ್ಯ. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಕೊಂಡಾಡಿದರು.
ಸಿದ್ದರಾಮಯ್ಯ ಕರ್ನಾಟಕ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ದಿದ್ದಾರೆ. ಅವರು ಹದಿನೇಳು ಬಾರಿ ಬಜೆಟ್ ಮಂಡಿಸಿರುವ ಏಕೈಕ ರಾಜಕಾರಣಿ. ಭಾರತ ದೇಶದ ರಾಜಕಾರಣದಲ್ಲಿ ಯಾರು ಅತಿ ಹೆಚ್ಚು ಬಜೆಟ್ ಮಂಡಿಸಿರುವ ಇತಿಹಾಸವಿಲ್ಲ. ಯಾವುದೇ ದೋಷ, ಕಳಂಕ ಇಲ್ಲದೆ ರಾಜಕೀಯ ಮಾಡಿಕೊಂಡು ಬಂದಿರುವವರು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಕರ್ನಾಟಕದ ಇತಿಹಾಸದಲ್ಲಿ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ ಎಂದರು.
ಮುಂದೆಯೂ ಕೂಡ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸದೃಢವಾದ ಸರ್ಕಾರ ಆಡಳಿತ ನಡೆಸುತ್ತಿದೆ. ಬೇರೆ ಪಕ್ಷದವರು ಯಾರು, ಏನು ಮಾಡಿಲ್ಲ. ಬರೀ ಭಾಷಣ ಮಾಡುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಡಾ. ಶಿವಾನಂದಪುರಿ ಸ್ವಾಮೀಜಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್, ಮಾಜಿ ಶಾಸಕ ಸಿ. ಎಸ್. ಪುಟ್ಟೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.