ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋ 
ರಾಜ್ಯ

ನಗರ ಸಾರಿಗೆ ಕ್ಷೇತ್ರದ ಪ್ರಶಂಸನಾ ಪ್ರಶಸ್ತಿಗೆ ಬೆಂಗಳೂರು ಸಂಚಾರ ಪೊಲೀಸ್ ಆಯ್ಕೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ

ಬೆಂಗಳೂರು ಸಂಚಾರ ಪೊಲೀಸರನ್ನು ಆಯ್ಕೆ ಮಾಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಗರ ಸಾರಿಗೆ ನಿರ್ವಹಣೆಯಲ್ಲಿ ತಂತ್ರಜ್ಞಾನ ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸಾಕ್ಷ್ಯಾಧಾರಿತ ಸಾರಿಗೆ ಯೋಜನೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬೆಂಗಳೂರು ಸಂಚಾರ ಪೊಲೀಸರಿಗೆ ಕೇಂದ್ರ ಸರ್ಕಾರದ ‘ನಗರ ಸಾರಿಗೆ ಕ್ಷೇತ್ರದ ಪ್ರಶಂಸನಾ ಪ್ರಶಸ್ತಿ’ (Commendation Award in Urban Transport) ಲಭಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡುವ ಈ ಪ್ರಶಸ್ತಿಗೆ, “ಕಾರ್ಯಾಚರಣೆ ಮತ್ತು ಸಾಕ್ಷ್ಯಾಧಾರಿತ ಸಾರಿಗೆ ಯೋಜನೆಗಾಗಿ ಬೃಹತ್ ದತ್ತಾಂಶ ವಿಶ್ಲೇಷಣೆಯ ಅತ್ಯುತ್ತಮ ಬಳಕೆ” (Best Use of Big Data Analytics for Operations and Evidence-based Transport Planning) ಎಂಬ ವಿಭಾಗದಲ್ಲಿ ಬೆಂಗಳೂರು ಸಂಚಾರ ಪೊಲೀಸರನ್ನು ಆಯ್ಕೆ ಮಾಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರಗಳಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ, ಸಂಚಾರ ನಿರ್ವಹಣೆಯ ಸವಾಲುಗಳು ಮತ್ತು ರಸ್ತೆ ಸುರಕ್ಷತೆಯ ಅಗತ್ಯಗಳನ್ನು ಸಮರ್ಥವಾಗಿ ಎದುರಿಸಲು ಆಧುನಿಕ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆ ಹಾಗೂ ವಾಸ್ತವಿಕ ಮಾಹಿತಿಯ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ಪೊಲೀಸರು ಕೈಗೊಂಡಿರುವ ಪ್ರಯತ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿರುವುದು ಶ್ಲಾಘನೀಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ರೂಪಿಸುವುದು, ಸಂಚಾರ ದಟ್ಟಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಮತ್ತು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಸಾರಿಗೆ ಅನುಭವ ಒದಗಿಸುವುದು ಮಹತ್ವದ ಆದ್ಯತೆಗಳಾಗಿವೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೃತ್ತಿಪರತೆ, ತಾಂತ್ರಿಕ ನೈಪುಣ್ಯ ಹಾಗೂ ಸಮರ್ಪಿತ ಸೇವೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2026ರ ಅಕ್ಟೋಬರ್ 24ರಂದು ಒಡಿಶಾದ ಭುವನೇಶ್ವರದ ಮೇಫೇರ್ ಸ್ಯಾಂಕ್ಚುರಿಯಲ್ಲಿ ನಡೆದ ನಗರ ಸಾರಿಗೆ ಭಾರತ ಸಮ್ಮೇಳನದ (Urban Mobility India Conference) ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಮನೋಹರ್ ಲಾಲ್ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು.

ಬೆಂಗಳೂರು ಸಂಚಾರ ಪೊಲೀಸರ ಈ ಸಾಧನೆಯು ರಾಜ್ಯದ ಇತರ ನಗರಗಳಲ್ಲಿಯೂ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸಲು ಪ್ರೇರಣೆಯಾಗಲಿದೆ. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಮತ್ತು ಆಧುನಿಕ ನಗರ ನಿರ್ವಹಣೆಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ! Video

'ಮನೆಯವರಿಗೆ ಬೇಗ ಕೊಡು ಅಂದಿದ್ನಲ್ಲ ಚಿನ್ನ': ಧನ್ವೀರ್​ಗೆ ಸ್ವತಃ ದರ್ಶನ್ ಹೇಳಿದ್ರೂ ಹಣ ಕೊಟ್ಟಿಲ್ಲ: ವೇಲು ನಾಯ್ಕರ್ ಆರೋಪ

ಫ್ರಾನ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳು: ಭುಗಿಲೆದ್ದ ಸಂಘರ್ಷ; 1,000 ಮಂದಿ ಬಂಧನ

ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿಗೆ ಡೀಲ್ ಕೊಟ್ಟ ಸಿಎಂ ಡಿಕೆಶಿ! ಎಚ್ ಡಿಕೆ ಹೊಸ ಬಾಂಬ್

'ಮತ ಗಳ್ಳತನ' ಪ್ರತಿಭಟನೆ ನಡುವೆ ಅ. 30 ರಿಂದ ನ. 1 ರವರೆಗೆ ದೆಹಲಿಯಲ್ಲೇ ಇರುವಂತೆ ಕಾಂಗ್ರೆಸ್ ಸಂಸದರಿಗೆ ಸೂಚನೆ!