ಬೆಂಗಳೂರು ಮತದಾರರ ಪಟ್ಟಿಯಲ್ಲಿ ಭಾರಿ ಬದಲಾವಣೆ 
ರಾಜ್ಯ

ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ SIR; ಮತದಾರರ ಸಂಖ್ಯೆ ಶೇ.43ರಷ್ಟು ಇಳಿಕೆ, 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿತ!

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 59,08,151 ಮತದಾರರಿದ್ದಾರೆ. ಇವರಲ್ಲಿ 28.67 ಲಕ್ಷ ಪುರುಷರು, 30.40 ಲಕ್ಷ ಮಹಿಳೆಯರು ಹಾಗೂ 674 ಮಂದಿ ಇತರ ವರ್ಗಕ್ಕೆ ಸೇರಿದವರಾಗಿದ್ದಾರೆ.

ಬೆಂಗಳೂರು: ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸಿದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ್ದು, ರಾಜಧಾನಿಯ ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.

ಎಸ್‌ಐಆರ್‌ ಆರಂಭಕ್ಕೂ ಮುನ್ನ 1.03 ಕೋಟಿಯಷ್ಟಿದ್ದ ಬೆಂಗಳೂರಿನ ಮತದಾರರ ಸಂಖ್ಯೆ, ಅಕ್ಟೋಬರ್‌ 27ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಲ್ಲಿ 59.08 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ, ಮತದಾರರ ಸಂಖ್ಯೆಯಲ್ಲಿ ಬರೊಬ್ಬರಿ ಶೇ.43.13ರಷ್ಟು ಕುಸಿತವಾಗಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 59,08,151 ಮತದಾರರಿದ್ದಾರೆ. ಇವರಲ್ಲಿ 28.67 ಲಕ್ಷ ಪುರುಷರು, 30.40 ಲಕ್ಷ ಮಹಿಳೆಯರು ಹಾಗೂ 674 ಮಂದಿ ಇತರ ವರ್ಗಕ್ಕೆ ಸೇರಿದವರಾಗಿದ್ದಾರೆ.

ಯಾವ ವ್ಯಾಪ್ತಿಯಲ್ಲಿ ಎಷ್ಟು ಮತದಾರರು?

ಅಂತಿಮ ಮತದಾರರ ಪಟ್ಟಿಯ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಆಡಳಿತ ಘಟಕಗಳಲ್ಲಿರುವ ಮತದಾರರ ವಿವರ ಹೀಗಿದೆ:

ಬೆಂಗಳೂರು ನಗರ: 24.01 ಲಕ್ಷ

ಬಿಬಿಎಂಪಿ ಉತ್ತರ: 13.25 ಲಕ್ಷ

ಬಿಬಿಎಂಪಿ ದಕ್ಷಿಣ: 11.13 ಲಕ್ಷ

ಬಿಬಿಎಂಪಿ ಕೇಂದ್ರ: 10.67 ಲಕ್ಷ

ಬೆಂಗಳೂರು ಗ್ರಾಮಾಂತರ: 8.04 ಲಕ್ಷ

46.88 ಲಕ್ಷ ಹೆಸರುಗಳು ಎಎಸ್‌ಡಿಡಿಒ ಪಟ್ಟಿಯಲ್ಲಿ

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46.88 ಲಕ್ಷ ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ (ASDDO-Absent, Shifted, Dead, Duplicate, and Others) ವರ್ಗದಡಿ ಗುರುತಿಸಲಾಗಿದೆ.

ಈ ವರ್ಗದಲ್ಲಿ ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಮತದಾರರ ಪಟ್ಟಿಯಲ್ಲಿರುವವರು ಹಾಗೂ ಇತರ ಪ್ರಕರಣಗಳು ಸೇರಿವೆ.

ಈ ಪೈಕಿ 7.27 ಲಕ್ಷ ಮತದಾರರನ್ನು ಗೈರುಹಾಜರಾದವರು ಎಂದು ಗುರುತಿಸಲಾಗಿದೆ. 32.74 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ನಮೂದಿಸಲಾಗಿದೆ. 3.19 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದ್ದು, 63,549 ಮಂದಿ ಈಗಾಗಲೇ ಬೇರೆಡೆ ಮತದಾರರಾಗಿ ನೋಂದಣಿಯಾಗಿರುವವರು ಎಂದು ವರ್ಗೀಕರಿಸಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಕಡಿತ

ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ಅಂದರೆ 3.63 ಲಕ್ಷ ಮತದಾರರ ಹೆಸರುಗಳನ್ನು ಎಎಸ್‌ಡಿಡಿಒ ವರ್ಗದಡಿ ಗುರುತಿಸಲಾಗಿದೆ. ಮಹದೇವಪುರದಲ್ಲಿ 2.96 ಲಕ್ಷ, ಬೊಮ್ಮನಹಳ್ಳಿಯಲ್ಲಿ 2.65 ಲಕ್ಷ ಹಾಗೂ ಕೆ.ಆರ್‌.ಪುರದಲ್ಲಿ 2.58 ಲಕ್ಷ ಮತದಾರರ ಹೆಸರುಗಳು ಈ ವರ್ಗದಲ್ಲಿವೆ. ಈ ನಾಲ್ಕೂ ಕ್ಷೇತ್ರಗಳನ್ನು ಪ್ರಸ್ತುತ ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಮುನ್ನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕಳೆದ ವರ್ಷ ಆರೋಪಿಸಿದ್ದರು.

ಇನ್ನು, ಬೆಂಗಳೂರಿನಲ್ಲಿ ಗಣನೀಯ ಅಲ್ಪಸಂಖ್ಯಾತ ಜನಸಂಖ್ಯೆ ಹೊಂದಿರುವ ಶಿವಾಜಿನಗರ ಕ್ಷೇತ್ರದಲ್ಲಿ 81,236 ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಎಸ್‌ಐಆರ್‌ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 4.41 ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದು ನಗರದಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ರಾಜಾಜಿನಗರದಲ್ಲಿ ಅತಿ ಕಡಿಮೆ ಅಂದರೆ 1.13 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ.

2.74 ಲಕ್ಷ ಹೊಸ ಮತದಾರರ ಸೇರ್ಪಡೆ

ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ, ಜಿಬಿಎ ವ್ಯಾಪ್ತಿಯ ಅಂತಿಮ ಪಟ್ಟಿಗೆ 2.74 ಲಕ್ಷ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಒಟ್ಟು 1,81,053 ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲಾಗಿದ್ದು, 65,881 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆಯ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟಾರೆ 2.08 ಲಕ್ಷ ಮತದಾರರ ನಿವ್ವಳ ಹೆಚ್ಚಳವಾಗಿದೆ ಎಂದು ಜಿಬಿಎ ತಿಳಿಸಿದೆ.

ಬೆಳಗಾವಿಯಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಎಸ್‌ಐಆರ್‌ ಆರಂಭಕ್ಕೂ ಮುನ್ನ 41.07 ಲಕ್ಷ ಮತದಾರರನ್ನು ಹೊಂದಿದ್ದ ಬೆಳಗಾವಿ ಜಿಲ್ಲೆಯಲ್ಲಿ ಪರಿಷ್ಕರಣೆ ಬಳಿಕ 36.35 ಲಕ್ಷ ಮತದಾರರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ 40.21 ಲಕ್ಷದಿಂದ 24.01 ಲಕ್ಷಕ್ಕೆ ಇಳಿಕೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 27.99 ಲಕ್ಷವಿದ್ದ ಮತದಾರರ ಸಂಖ್ಯೆ 22.80 ಲಕ್ಷಕ್ಕೆ ಕುಸಿದಿದೆ. ಆದಾಗ್ಯೂ, ಎಸ್‌ಐಆರ್‌ ಬಳಿಕವೂ ಬೆಳಗಾವಿ, ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳು ಕ್ರಮವಾಗಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಗಳಾಗಿ ಮುಂದುವರಿದಿವೆ.

'ಅರ್ಹ ಮತದಾರರ ಹೆಸರು ಅಳಿಸಿಲ್ಲ'

ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌, ಅರ್ಹ ಮತದಾರರ ಹೆಸರನ್ನು ಕೇವಲ ಸಾಮೂಹಿಕವಾಗಿ ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಿದ ಕಾರಣಕ್ಕೆ ಅಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಅರ್ಹ ಮತದಾರರೊಬ್ಬರ ಹೆಸರನ್ನೂ ಅಳಿಸಿಲ್ಲ ಎಂದು ಹೇಳಿದ ಅವರು, ಫಾರ್ಮ್‌-6 ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.

"ಅರ್ಹ ಮತದಾರರನ್ನು ಯಾವುದೇ ಕಾರಣವಿಲ್ಲದೆ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಗೊಂದಲ ಅಥವಾ ಆತಂಕ ಬೇಡ. ಕಾನೂನಿನ ಪ್ರಕಾರ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಸಲಾಗಿದೆ" ಎಂದು ಅವರು ತಿಳಿಸಿದ್ದರು.

ರಾಜ್ಯದಲ್ಲಿ 1,000ಕ್ಕಿಂತ ಕಡಿಮೆ ವಿದೇಶಿಯರ ಗುರುತು

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಎಷ್ಟು ವಿದೇಶಿಯರನ್ನು ಗುರುತಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನ್ಬುಕುಮಾರ್‌, ವಿದೇಶಿಯರನ್ನು ಗುರುತಿಸಲಾಗಿದ್ದು, ಅವರ ಸಂಖ್ಯೆ 1,000ಕ್ಕಿಂತ ಕಡಿಮೆ ಇದೆ ಎಂದು ಹೇಳಿದರು. ಮೂಲಗಳ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಗುರುತಿಸಲಾದ ವಿದೇಶಿಯರಲ್ಲಿ ಹೆಚ್ಚಿನವರು ನೇಪಾಳ ಮೂಲದವರು ಎನ್ನಲಾಗಿದೆ.

ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಮಾತ್ರಕ್ಕೆ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯವಾಗುವುದಿಲ್ಲ. ಮತದಾರರ ಪಟ್ಟಿಯನ್ನು ನಿರಂತರವಾಗಿ ನವೀಕರಿಸಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಈ ಫಲಿತಾಂಶ ಆಶ್ಚರ್ಯವೇನಲ್ಲ, ಮೋದಿಗೂ ಇದು ಎಚ್ಚರಿಕೆ ಸಂಕೇತ': MLC ಚುನಾವಣೆಯಲ್ಲಿ 'ಕೈ' ಶೂನ್ಯ ಸಾಧನೆ ಬಗ್ಗೆ BK ಹರಿಪ್ರಸಾದ್

'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ, ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ: ಯತೀಂದ್ರ ಸಿದ್ದರಾಮಯ್ಯ

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

ಯಾವುದೇ ಚುನಾವಣೆ ಒಂದು ಎಚ್ಚರಿಕೆಯ ಗಂಟೆ; 2028ಕ್ಕೆ ನಾವೇ ಗೆಲ್ಲುತ್ತೇವೆ: ಪ್ರಿಯಾಂಕ್ ಖರ್ಗೆ; Video

'ನಿಸ್ವಾರ್ಥಿ, ನಿರ್ಭೀತ ಬ್ಯಾಟಿಂಗ್‌ಗೆ ಅವನೇ ಕಾರಣ!'; ಸ್ಥಾನ ಬಿಟ್ಟುಕೊಟ್ಟ ಸಂಜುಗೆ ಅಭಿಷೇಕ್ ಶರ್ಮಾ ಫುಲ್ ಫಿದಾ!